ಕಾಸರಗೋಡು(ಕೇರಳ): ಬೀದಿನಾಯಿಗಳ ದಾಳಿ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಭದ್ರತೆ ನೀಡಲು ಸಾರ್ವಜನಿಕವಾಗಿ ಏರ್ ಗನ್ ಪ್ರದರ್ಶಿಸಿದ ವ್ಯಕ್ತಿಯ ಮೇಲೆ ಕೇಸ್ ಜಡಿಯಲಾಗಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಕೈಯಲ್ಲಿ ಏರ್ ಗನ್ ಹಿಡಿದುಕೊಂಡಿದ್ದು, ನಾಯಿಗಳು ದಾಳಿ ಮಾಡಿದರೆ ಕೊಂದೇ ಬಿಡುವೆ ಎನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಮೀರ್ ಏರ್ಗನ್ ಪ್ರದರ್ಶಿಸಿದ ವ್ಯಕ್ತಿ. ಕೇರಳದ ಕಾಸರಗೋಡಿನಲ್ಲಿನ ಮದರಸಾಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿರುವ ಈತ ಏರ್ಗನ್ ಹಿಡಿದುಕೊಂಡು ಮುಂದೆ ಸಾಗಿದ್ದರೆ, ಮಕ್ಕಳು ಗುಂಪಾಗಿ ಹಿಂದೆ ಬರುತ್ತಿದ್ದಾರೆ. ಈ ವೇಳೆ, ಎದುರಿಗೆ ಕಂಡ ವ್ಯಕ್ತಿಗೆ ಹೇಳುತ್ತಾ, "ಬೀದಿನಾಯಿ ದಾಳಿ ಮಾಡಿದರೆ ಗುಂಡು ಹಾರಿಸಿ ಕೊಂದೇ ಬಿಡುವೆ" ಎಂದು ನುಡಿಯುತ್ತಿರುವುದು ವಿಡಿಯೋದಲ್ಲಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದಿನದ ಬಳಿಕ ಪೊಲೀಸರು ಈತನ ವಿರುದ್ಧ ಗಲಭೆ, ಭಯ ಹುಟ್ಟಿಸಿದ ಕಾರಣಕ್ಕಾಗಿ ಕೇಸ್ ದಾಖಲಿಸಿದ್ದಾರೆ.
ಮಕ್ಕಳ ರಕ್ಷಣೆಗಾಗಿ ಬಂದೂಕು ಹಿಡಿದಿದ್ದೆ: ತನ್ನ ವಿರುದ್ಧ ಕೇಸ್ ದಾಖಲಾದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಮೀರ್, ನಾಯಿ ದಾಳಿ ಭೀತಿಯಿಂದಾಗಿ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು. ಮಕ್ಕಳ ತಂದೆಯಾಗಿ ಅವರಿಗೆ ಭದ್ರತೆ ನೀಡುವ ದೃಷ್ಟಿಯಿಂದ ಏರ್ ಗನ್ ಹಿಡಿದು ಮಕ್ಕಳನ್ನು ಶಾಲೆಗೆ ಬಿಟ್ಟು ಬಂದಿದ್ದೆ ಅಷ್ಟೇ ಎಂದಿದ್ದಾನೆ.
ಇನ್ನು ಕೇರಳದಲ್ಲಿ ನಾಯಿ ದಾಳಿಗಳ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಾಲೆಗೆ ಹೋಗುತ್ತಿದ್ದ ಮಗುವಿನ ಮೇಲೆ ನಾಯಿಗಳು ದಾಳಿ ಕೊಂದ ಘಟನೆ ಈಚೆಗಷ್ಟೇ ವರದಿಯಾಗಿತ್ತು. ನಾಯಿಗಳ ಸಂಖ್ಯೆ ನಿಯಂತ್ರಣ ಮತ್ತು ಆ್ಯಂಟಿ ರೇಬಿಸ್ ಲಸಿಕೆ ಹಾಕುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿದೆ. ಬೀದಿ ನಾಯಿಗಳಿಗೆ ಲಸಿಕೆ ಹಾಕಲು ಮತ್ತು ನಾಯಿ ಸಂಖ್ಯೆ ಕಡಿತಕ್ಕಾಗಿ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 20 ರವರೆಗೆ ರಾಜ್ಯಾದ್ಯಂತ ಸಾಮೂಹಿಕ ಲಸಿಕೆ ಅಭಿಯಾನ ಪ್ರಾರಂಭಿಸಿದೆ.
ಕೆಲ ದಿನಗಳ ಹಿಂದೆ 2 ಡೋಸ್ ರೇಬಿಸ್ ಲಸಿಕೆ ಪಡೆದಿದ್ದರೂ ಮಗುವೊಂದು ಮೃತಪಟ್ಟಿತ್ತು. ಇದು ಲಸಿಕೆಯ ಗುಣಮಟ್ಟದ ಮೇಲೆಯೇ ಶಂಕೆ ಮೂಡಿಸಿದೆ. ಈ ಬಗ್ಗೆ ತನಿಖೆಗೆ ಕೇರಳ ಸರ್ಕಾರ ಸಮಿತಿ ರಚಿಸಿದೆ ಎಂದು ಹೇಳಲಾಗಿದೆ.
ಓದಿ: ಮನೆಗೆ ನುಗ್ಗಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ.. ಬೆಚ್ಚಿಬಿದ್ದ ಕುಟುಂಬ