ಕೋಲ್ಕತ್ತಾ : 2021ರಲ್ಲಿ ಮಮತಾ ಬ್ಯಾನರ್ಜಿ ಸಾಮ್ರಾಜ್ಯವಾದ ಪಶ್ಚಿಮ ಬಂಗಾಳವನ್ನು ಆಳಬೇಕೆನ್ನುವ ಬಿಜೆಪಿ ಕನಸು ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ನುಚ್ಚುನೂರಾಯಿತು. ಬಂಗಾಳದಲ್ಲಿ 2019ರ ಲೋಕಸಭಾ ಚುನಾವಣೆಯ ವೇಳೆ ರಾಜ್ಯದ 42 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದಿದ್ದ ಬಿಜೆಪಿಯ ಗೆಲುವಿನ ಓಟಕ್ಕೆ 2021ರ ಚುನಾವಣೆ ಬ್ರೇಕ್ ಹಾಕಿತು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ದ್ವಿಶತಕದ ಗಡಿ ದಾಟಿದರೆ, ಬಿಜೆಪಿಗೆ ಮೂರಂಕಿಗಳ ಸಮೀಪಕ್ಕೆ ಸಹ ಹೋಗಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಮಮತಾ ಬ್ಯಾನರ್ಜಿ ಸತತ 3ನೇ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಗದ್ದುಗೆಯನ್ನೇರಿದರು. ಬಂಗಾಳ ಚುನಾವಣೆ ಗೆಲುವಿನ ಹಿಂದೆ ಕೆಲಸ ಮಾಡಿದ ಸಾಕಷ್ಟು ಅದ್ಭುತ ರಾಜಕೀಯ ಪ್ರವೀಣರಿದ್ದಾರೆ.
ಮೊದಲಿಗೆ ಈ ಅದ್ಭುತ ಗೆಲುವಿನ ಕ್ರೆಡಿಟ್ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರ ಸಂಬಂಧಿ ಅವಿಶೇಕ್ ಬಂದೋಪಾಧ್ಯಾಯರಿಗೆ ಸಲ್ಲಬೇಕು. ಮುಖ್ಯವಾಗಿ ಮತಗಳನ್ನು ಸೆಳೆಯುವ ಮತ್ತು ಉಳಿಸಿಕೊಳ್ಳುವ ಬಗ್ಗೆ ತನ್ನದೇ ಆದ ಪರಿಣಾಮಕಾರಿ ಸ್ಟ್ರಾಟೆರ್ಜಿ ರೂಪಿಸಿದ್ದ ಪ್ರಶಾಂತ್ ಕಿಶೋರ್ ಮತ್ತು ಅವರ ಸಂಸ್ಥೆ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ(IPAC) ಸಹ ದೀದಿ ಗೆಲುವಿಗೆ ಸಾಕಷ್ಟು ಶ್ರಮಿಸಿದೆ.
ಪಶ್ಚಿಮ ಬಂಗಾಳದಲ್ಲಿ ಕೇಸರಿ ಬಾವುಟ ಹಾರುವುದನ್ನು ತಡೆಯುವಲ್ಲಿ ಮಮತಾ ಬ್ಯಾನರ್ಜಿ ಅವರ ಪ್ರಯತ್ನಗಳನ್ನು ಫಲವತ್ತಾಗಿಸುವಲ್ಲಿ ಕಿಶೋರ್ ವಿವರಿಸಿದ ಚುನಾವಣಾ ಕಾರ್ಯತಂತ್ರಗಳು ನಿರ್ಣಾಯಕವಾಗಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಉದ್ಭವಿಸುವ ಪ್ರಶ್ನೆ ಏನೆಂದರೆ, TMC- IPAC ಸಂಬಂಧಗಳು ಎಷ್ಟು ದಿನ ಮುಂದುವರಿಯುತ್ತದೆ ಎಂಬುದು. ಮೂಲಗಳ ಪ್ರಕಾರ ಕಿಶೋರ್‌ನ ಸಂಘಟನೆಯು ಮೊದಲಿನಂತೆಯೇ ಮುಂದುವರಿಯುತ್ತದೆ.
ಬಂಗಾಳ ಚುನಾವಣೆ ನಂತರ ರಾಜಕೀಯ ಕಾರ್ಯತಂತ್ರ ನಿಪುಣ, ಪಿಕೆ ಎಂದೇ ಪ್ರಸಿದ್ಧಿ ಪಡೆದಿರುವ ಪ್ರಶಾಂತ್ ಕಿಶೋರ್, ತನ್ನ ಕೆಲಸ ಬಿಟ್ಟು ಬೇರೆ ಕೆಲಸದಲ್ಲಿ ತೊಡಗುವುದಾಗಿ ಹೇಳಿಕೊಂಡಿದ್ದರು. ಆದರೆ, ಇನ್ನು ಮುಂದೆ ರಾಜಕೀಯದಲ್ಲಿ ಅವರ ಪಾತ್ರ ಏನೆಂಬುದರ ಬಗ್ಗೆ ಅವರು ಸ್ಪಷ್ಟಪಡಿಸಬೇಕು. ಏಕೆಂದರೆ, ಅವರು ಈಗ ಸಕ್ರಿಯ ರಾಜಕೀಯದತ್ತ ಮುಖಮಾಡಬಹುದು ಎಂಬ ವದಂತಿಗಳು ಈಗಾಗಲೇ ಹರಿದಾಡುತ್ತಿವೆ. ಈ ಮಧ್ಯೆ, ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ ಮತ್ತು ತೃಣಮೂಲ ಕಾಂಗ್ರೆಸ್ ಎರಡೂ ಈಗಾಗಲೇ ದೀರ್ಘಾವಧಿಯ ಪರಸ್ಪರ ವ್ಯವಸ್ಥೆಯನ್ನು ಮಾಡಿಕೊಂಡಿವೆ. ಆದರೆ, ಈ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಆದಾಗ್ಯೂ, ಪಕ್ಷದ ಮೂಲಗಳು TMC- IPAC ವ್ಯವಸ್ಥೆಯು ಕನಿಷ್ಠ ಐದು ವರ್ಷಗಳವರೆಗೆ ಮುಂದುವರಿಯುತ್ತದೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 2026ರ ವಿಧಾನಸಭಾ ಚುನಾವಣೆಯವರೆಗೆ ಪ್ರಶಾಂತ್ ಕಿಶೋರ್ ಅವರ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿಯ (ಐ-ಪಿಎಸಿ) ಸಹಾಯ ಪಡೆಯಲಿದೆ ಎನ್ನುತ್ತವೆ. ಆದರೆ, ಪಿಕೆ ಜೊತೆಗಿನ ಹೊಂದಾಣಿಕೆ ವ್ಯವಸ್ಥೆಯಿಂದ ಏನು ಪ್ರಯೋಜನವಾಗಲಿದೆ ಎಂಬುದರ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲು ತೃಣಮೂಲ ನಾಯಕರು ಯಾರೂ ಸಿದ್ಧರಿಲ್ಲ. ಆದರೆ, ಇದು ತೃಣಮೂಲ ಕಾಂಗ್ರೆಸ್ಗೆ ಪ್ರಯೋಜನಕಾರಿಯಾದದ್ದು ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ, TMC-IPAC ವ್ಯವಸ್ಥೆ ದೀರ್ಘವಾಗಿ ಉಳಿಯಬೇಕೆಂದು ಟಿಎಂಸಿ ನಾಯಕರ ಬಯಕೆ.
2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿನ ಭರ್ಜರಿ ಗೆಲುವು ಮಮತಾ ಬ್ಯಾನರ್ಜಿಯವರ ರಾಷ್ಟ್ರೀಯ ದೃಷ್ಟಿಕೋನ ಪ್ರಸ್ತುತತೆಯನ್ನು ವೇಗಗೊಳಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಾಗಾಗಿ, ಇಂದಿನಿಂದ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಯಾರನ್ನ ಮುಖ್ಯಸ್ಥರನ್ನಾಗಿ ಮಾಡಬಹುದು ಎಂಬ ನೀಲನಕ್ಷೆಯನ್ನು ತಯಾರಿಸಲು ಅವರು ನಿರ್ಧರಿಸಿದ್ದಾರೆ. 2024ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸುವುದು ನಮ್ಮ ಮುಖ್ಯಮಂತ್ರಿಯವರ ಏಕೈಕ ಗುರಿ ಎಂದು ಟಿಎಂಸಿ ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.
ಇಂತಹ ನಿರ್ಣಾಯಕ ಪರಿಸ್ಥಿತಿಯಲ್ಲಿ ತೃಣಮೂಲ ನಾಯಕತ್ವ ದ್ವಿಮುಖ ತಂತ್ರವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಮೊದಲನೆಯದು ದೇಶದ ಎಲ್ಲಾ ಬಿಜೆಪಿ ವಿರೋಧಿ ಪಡೆಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಮಧ್ಯಂತರ ಅವಧಿಯಲ್ಲಿ ಪಕ್ಷದ ರಾಷ್ಟ್ರೀಯ ಜಾಲವನ್ನು ಗಣನೀಯವಾಗಿ ವಿಸ್ತರಿಸುವುದು. ಪಿಕೆ- ಶರದ್ ಪವಾರ್ ನಡುವಿನ ಸಭೆ ಈ ದಿಕ್ಕಿನಲ್ಲಿ ಅಂತಹ ಒಂದು ಹೆಜ್ಜೆಯಾಗಿತ್ತು ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ ರಾಜ್ಯಸಭೆಗೆ ಪ್ರಶಾಂತ್ ಕಿಶೋರ್ ಅವರನ್ನು ಆಯ್ಕೆ ಮಾಡಬಹುದೆಂದು ವದಂತಿಗಳಿವೆ. ಅದೇ ರೀತಿ ಮುಕುಲ್ ರಾಯ್ ಅವರನ್ನು ಸಂಸತ್ತಿನ ಮೇಲ್ಮನೆಗೆ ಕಳುಹಿಸಬಹುದು. ಇನ್ನು,ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ಸೇರಿದ ಯಶವಂತ್ ಸಿನ್ಹಾ ರಾಜ್ಯಸಭಾ ಸ್ಥಾನಕ್ಕೆ ತೃಣಮೂಲ ಕಾಂಗ್ರೆಸ್ನ ಮೂರನೇ ಅಭ್ಯರ್ಥಿ ಎನ್ನಲಾಗಿದೆ.
ಈಗ, ಈ ದ್ವಿಮುಖ ತಂತ್ರವು ತೃಣಮೂಲದ ರಾಷ್ಟ್ರೀಯ ಕನಸನ್ನು ಫಲಪ್ರದವಾಗಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಸದ್ಯದ ಪ್ರಶ್ನೆ. ಬಿಜೆಪಿ ಆಡಳಿತವನ್ನು ಕೊನೆಗೊಳಿಸುವಲ್ಲಿ ತೃಣಮೂಲ ತನ್ನ ಗುರಿಯನ್ನು ಸಾಧಿಸಲಿದೆಯೇ? ಪಿಕೆ ಅವರ IPAC ವೃತ್ತಿಪರ ಸಂಸ್ಥೆಯಾಗಿರುವುದರಿಂದ ಅದು ರಾಜಕೀಯ ಭಾವನೆಗಳಿಂದ ಮುಕ್ತವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಕೋಲ್ಕತಾ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ ಮತ್ತು ರಾಜಕೀಯ ವಿಶ್ಲೇಷಕ ರಾಜಗೋಪಾಲ್ ಧಾರ್ ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ ”ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ ಜೊತೆಗಿನ ಒಡನಾಟವು ಮುಂದಿನ ದಿನಗಳಲ್ಲಿ ತೃಣಮೂಲಕ್ಕೆ ಪ್ರಯೋಜನವನ್ನು ನೀಡುತ್ತದೆ. ಪ್ರಶಾಂತ್ ಕಿಶೋರ್ ಈಗ ರಾಜಕೀಯದಲ್ಲಿನ ಸಂಕೀರ್ಣ ಸಮೀಕರಣಗಳನ್ನು ಚೆನ್ನಾಗಿ ತಿಳಿದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಇತರ ರಾಜಕೀಯ ಪಕ್ಷಗಳು ಸಹ ಇದೇ ರೀತಿಯ ವೃತ್ತಿಪರ ಸಂಸ್ಥೆಗಳೊಂದಿಗೆ ಒಡನಾಟವನ್ನು ಹೊಂದಿರಬೇಕು ”ಎಂದು ಅವರು ಹೇಳಿದರು. ಆದರೆ, ಸದ್ಯಕ್ಕೆ ಪಿಕೆ ಅವರು ರಾಜಕೀಯಕ್ಕೆ ನೇರವಾಗಿ ಎಂಟ್ರಿ ಕೊಟ್ಟ ನಂತರ ಈ ವೃತ್ತಿಪರ ವಿಧಾನವನ್ನು ಅವರು ನಿರ್ವಹಿಸಲು ಸಾಧ್ಯವಾಗುತ್ತದೆಯೇ? ಎಂಬುದು ಈಗಿನ ಪ್ರಶ್ನೆಯಾಗಿದೆ.