ಕೋಲ್ಕತಾ: 2021ರ ರಾಜ್ಯ ಚುನಾವಣೆಯಲ್ಲಿ ಟಿಎಂಸಿ ಸರ್ಕಾರವನ್ನು "ಬೇರು ಸಹಿತ ಕಿತ್ತು ಹಾಕುವಂತೆ" ರಾಜ್ಯದ ಜನರಿಗೆ ಮನವಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿ ಕಾರಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಅಗತ್ಯ ಆಹಾರ ಪದಾರ್ಥಗಳ ಬೆಲೆ ನಿಯಂತ್ರಿಸುವುದು ಕೇಂದ್ರದ ಕರ್ತವ್ಯ ಎಂದಿದ್ದಾರೆ.
ಗಗನಕ್ಕೇರಿರುವ ಆಲೂಗಡ್ಡೆ ಮತ್ತು ಈರುಳ್ಳಿಯಂತಹ ಅಗತ್ಯ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸುವ ರಾಜ್ಯಗಳ ಅಧಿಕಾರವನ್ನು ಪುನಃ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವೆ. ಅಥವಾ ಕೇಂದ್ರವು ಬೆಲೆಗಳನ್ನು ನಿಯಂತ್ರಿಸಬೇಕು ಎಂದು ಹೇಳಿದ್ದಾರೆ.
ಪ್ರಮುಖ ಸರಕು ವಸ್ತುಗಳ ಪಟ್ಟಿಯಿಂದ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ತೆಗೆದ ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ "ಜನ ವಿರೋಧಿ". ಈ ಮಸೂದೆ ಬ್ಲಾಕ್ ಮಾರ್ಕೆಟ್ ಮತ್ತು ಅಗಕ್ರಮವಾಗಿ ಸಂಗ್ರಹಿಸುವವರನ್ನು ರಕ್ಷಿಸುವ ಗುರಿ ಹೊಂದಿದೆ ಎಂದು ಆರೋಪಿಸಿದ್ದಾರೆ.
2021ರ ಚುನಾವಣೆಗೆ ಮುನ್ನ ಸಿದ್ಧತೆ ಪರಿಶೀಲಿಸಲು ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಭೇಟಿಯಲ್ಲಿರುವ ಅಮಿತ್ ಶಾ ಅವರ ವಿರುದ್ಧ ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನೀವು ಮಮತಾ ಬ್ಯಾನರ್ಜಿ ಸರ್ಕಾರವನ್ನು ಕಿತ್ತುಹಾಕುತ್ತೀರಾ? ಆಲೂಗಡ್ಡೆ ಮತ್ತು ಈರುಳ್ಳಿಯ ಬೆಲೆಯಲ್ಲಿ ಹೆಚ್ಚಳದಿಂದಾಗಿ ನಿಮ್ಮನ್ನು ಯಾರು ಕಿತ್ತು ಹಾಕುತ್ತಾರೆ? ಅಗತ್ಯ ಆಹಾರ ಪದಾರ್ಥಗಳ ಹೆಚ್ಚಳವಾದರೆ ಜನ ಏನು ತಿನ್ನಬೇಕು ಎಂದು ಪ್ರಶ್ನಿಸಿದ್ದಾರೆ.