ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರು ಸೆಪ್ಟೆಂಬರ್ 10ರಂದು ನಾಮಪತ್ರ ಸಲ್ಲಿಕೆ ಮಾಡುವುದಾಗಿ ಟಿಎಂಸಿ ಘೋಷಿಸಿದೆ.
ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಪರಾಭವಗೊಂಡಿದ್ದರು. ಆದಾಗ್ಯೂ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ಪಶ್ಚಿಮ ಬಂಗಾಳದ ಭವಾನಿಪುರ, ಜಂಗೀಪುರ ಹಾಗೂ ಸಮ್ ಸೇರ್ ಗುಂಜ್ ಕ್ಷೇತ್ರಕ್ಕೆ ಸೆಪ್ಟೆಂಬರ್ 30ರಂದು ಉಪಚುನಾವಣೆ ಜರುಗಲಿದ್ದು, ಅಕ್ಟೋಬರ್ 3ರಂದು ಮತ ಎಣಿಕೆ ನಡೆಯಲಿದೆ. ಮೂರು ಕ್ಷೇತ್ರಗಳಿಗೆ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡುತ್ತಿರುವ ಭವಾನಿಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನ ಕಣಕ್ಕಿಳಿಸದಿರುವ ನಿರ್ಧಾರ ಕೈಗೊಂಡಿದೆ. ಭವಾನಿಪುರದ ಟಿಎಂಸಿ ಶಾಸಕ ಶೋಭನ್ ದೇವ್ ಚಟ್ಟೋಪಾಧ್ಯಾಯ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಖರ್ದಹಾ ಕ್ಷೇತ್ರದಿಂದ ಚುನಾವಣೆ ಎದುರಿಸಲಿದ್ದಾರೆ.