ಕೋಲ್ಕತ್ತಾ( ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ಸುಳ್ಳು ಹೇಳುವ ಮೂಲಕ ನಂದಿಗ್ರಾಮಕ್ಕೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿ ಇಂದು ಬೆಳಗ್ಗೆ ನಂದಿಗ್ರಾಮದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ನನ್ನ ಮೇಲೆ ಕೆಲವರು ಉದ್ದೇಶಪೂರ್ವಕವಾಗಿಯೇ ಹಲ್ಲೆ ಮಾಡಿದ್ದಾರೆಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಇದಕ್ಕೆ ಬಿಜೆಪಿ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ಮಮತಾ ಬ್ಯಾನರ್ಜಿ ಅವರು ನಾಟಕ ಮಾಡುವುದರಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಇದು ಅವರ ಹಳೆಯ ಅಭ್ಯಾಸ. ರಾಜಕೀಯ ಉದ್ದೇಶ ಮತ್ತು ಜನರ ಸಿಂಪಥಿ ಗಳಿಸುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೊಂದೆಡೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಇಂದು ಪುರ್ಬಾ ಮದಿನಿಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಭು ಗೋಯೆಲ್ ಮತ್ತು ಎಸ್ಪಿ ಪ್ರವೀಣ್ ಪ್ರಕಾಶ್ ಅವರು ನಂದಿಗ್ರಾಮಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಇನ್ನು ಈ ಕುರಿತು ಭಾರತೀಯ ದಂಡಸಂಹಿತೆ ಐಪಿಸಿ ಸೆಕ್ಷನ್ 341 ಮತ್ತು 323 ರಡಿ ಕೇಸು ದಾಖಲಾಗಿದೆ ಎಂದು ಪುರ್ಬ ಮೇದಿನೀಪುರ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಟಿಎಂಸಿ ನಾಯಕ ಸುಫಿಯಾನ್ ನೀಡಿರುವ ದೂರಿನ ಮೇಲೆ ನಾವು ದೂರು ದಾಖಲಿಸಿಕೊಂಡಿದ್ದೇವೆ. ನಮ್ಮ ತನಿಖೆ ಮುಂದುವರಿದಿದ್ದು ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.