ಕೋಲ್ಕತಾ(ಪಶ್ಚಿಮ ಬಂಗಾಳ): ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮದ ಆರೋಪ ಮಾಡಿದ್ದ ಸಿಎಂ ಮಮತಾ ಬ್ಯಾನರ್ಜಿ ಕಲ್ಕತ್ತಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ತಾವು ಸ್ಪರ್ಧಿಸಿದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಗೆ ಮನವಿ ಮಾಡಿದ್ದಾರೆ.
ಚುನಾವಣೆ ವೇಳೆ ರಿಗ್ಗಿಂಗ್ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ನ್ಯಾ.ಕೌಶಿಕ್ ಚಂಡ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಲಿದೆ.
ಎಣಿಕೆಯಲ್ಲಿ ಗೊಂದಲ
ಚುನಾವಣಾ ಫಲಿತಾಂಶದ ದಿನದಂದೇ ಅನೇಕ ಗೊಂದಲಗಳು ಸೃಷ್ಟಿಯಾಗಿದ್ದವು. ಮೇ 2ರಂದು ಚುನಾವಣಾ ಮತ ಎಣಿಕೆ ನಡೆದಿತ್ತು. ಅಂದು ಮಧ್ಯಾಹ್ನದ ವೇಳೆಗೆ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಜಯ ಸಾಧಿಸಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು.
ಇದನ್ನೂ ಓದಿ: ರಿಸಲ್ಟ್ ಗೊಂದಲ: ಜನರ ತೀರ್ಪು ಸ್ವೀಕರಿಸುತ್ತೇನೆಂದು ಹೇಳಿ, ಕೋರ್ಟ್ ಮೆಟ್ಟಿಲೇರಲು ಸಜ್ಜಾದ ದೀದಿ
ಆದರೆ ಸಂಜೆಯ ವೇಳೆಗೆ ಬಿಜೆಪಿಯ ಸುವೇಂದು ಅಧಿಕಾರಿ 1,736 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಘೋಷಣೆ ಮಾಡಲಾಯಿತು. ಇದೇ ವೇಳೆ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಮಮತಾ ಆರೋಪಿಸಿದ್ದರು.