ದೆಹಲಿ: ಕೇಂದ್ರದ ಮೂರು ಕೃಷಿಕಾಯ್ದೆಗಳ ವಿರುದ್ಧ ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯುದ್ಧವೀರ್ ಸಿಂಗ್ ನೇತೃತ್ವದ ರೈತರ ತಂಡ ಪ್ರತಿಭಟನೆ ನಡೆಸುತ್ತಿದೆ. ರಾಕೇಶ್ ಟಿಕಾಯತ್ರನ್ನು ಭೇಟಿ ಮಾಡಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ನಾವು ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕರಿಸಿದ್ದೇವೆ. ರೈತರೊಂದಿಗೆ ಸದಾ ಇರುತ್ತೇವೆ. ರೈತರ ಬೇಡಿಕೆ ಈಡೇರುವವರೆಗೂ ಅವರ ಪ್ರತಿಭಟನೆಗೆ ನಾವು ಬೆಂಬಲ ನೀಡುತ್ತೇವೆ ಎಂದು ಪುನರುಚ್ಛರಿಸಿದ್ದಾರೆ.
ಕೇಂದ್ರದ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸುವ ಸಂಬಂಧ ಯೋಜನೆ ರೂಪಿಸಲು ಚರ್ಚೆ ನಡೆಸಿದ್ದಾರೆ. ಶಿಕ್ಷಣ, ಆರೋಗ್ಯ, ಸ್ಥಳೀಯ ರೈತರ ಹಿತದ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಈಗ ಕೈಗಾರಿಕೆಗಳು ಸಂಕಷ್ಟದಲ್ಲಿವೆ. ಔಷಧಗಳ ಮೇಲೆಯೂ ಜಿಎಸ್ಟಿ ವಿಧಿಸಲಾಗುತ್ತಿದೆ. ರೈತರ ಪ್ರತಿಭಟನೆ ಆರಂಭವಾಗಿ ಅದೆಷ್ಟೋ ತಿಂಗಳುಗಾಗುತ್ತಿದೆ. ಆದರೆ ಕೇಂದ್ರ ಈ ಬಗ್ಗೆ ಚಿಂತಿಸುತ್ತಿಲ್ಲ, ಕಾಯ್ದೆಯನ್ನು ವಾಪಸ್ ಪಡೆಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ರೈತ ಮುಖಂಡ ರಾಕೇಶ್ ಟಿಕಾಯಿತ್ ಮಾತನಾಡಿ, ಮಮತಾ ಬ್ಯಾನರ್ಜಿಯವರು ರೈತರಿಗೆ ಸದಾ ಬೆಂಬಲ ನೀಡುತ್ತ ಬಂದಿದ್ದಾರೆ. ಹಾಗೇ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಅವರು ಕೇಂದ್ರಕ್ಕೆ ಪತ್ರ ಬರೆಯಲಿ. ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಅವರು ಗಮನಹರಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.