ನವದೆಹಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಅಧಿಕೃತವಾಗಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು, ಸಂಸದರು, ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಾಧ್ಯಕ್ಷರು ಮತ್ತು ಎಐಸಿಸಿಯ ಇತರ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ಹಿರಿಯರಿಗೆ ಆಹ್ವಾನ ಕಳುಹಿಸಲಾಗಿದೆ. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಯಪುರದಲ್ಲಿ ಮಾತನಾಡಿದ ಬಘೇಲ್, 'ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ. ನನಗೂ ಈ ಸಂದರ್ಭದಲ್ಲಿ ಹಾಜರಿರಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಪಕ್ಷದ ಉನ್ನತ ಹುದ್ದೆಯ ರೇಸ್‌ನಲ್ಲಿ ಖರ್ಗೆ ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದರು. ಈ ಮೂಲಕ 24 ವರ್ಷಗಳ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಗಾಂಧಿಯೇತರ ಎಂಬ ಹೆಗ್ಗಳಿಕೆಗೆ ಖರ್ಗೆ ಪಾತ್ರರಾಗಿದ್ದಾರೆ. ಅಕ್ಟೋಬರ್ 17 ರಂದು ನಡೆದ ಚುನಾವಣೆಯಲ್ಲಿ ಖರ್ಗೆ 7,897 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ತರೂರ್ 1,072 ಮತಗಳನ್ನು ಪಡೆದಿದ್ದರು.
ಚುನಾವಣಾ ಗೆಲುವಿನ ಬಳಿಕ ಮಾತನಾಡಿದ್ದ ಖರ್ಗೆ, ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿರುವ ಸಂದರ್ಭದಲ್ಲಿ ಸಂಘಟನಾ ಚುನಾವಣೆ ನಡೆಸುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಪಕ್ಷ ಯಶಸ್ವಿಯಾಗಿದ್ದು, ಮಾದರಿಯೂ ಆಗಿದೆ ಎಂದು ಹೇಳಿದ್ದರು.
ಇದನ್ನು ಓದಿ:ಬ್ರಿಟನ್ನಿಂದ ಪಾಠ ಕಲಿಯಬೇಕೆಂದ ತರೂರ್, ಚಿದಂಬರಂ: ಏನೂ ಕಲಿಯಬೇಕಿಲ್ಲವೆಂದ ಕಾಂಗ್ರೆಸ್!