ನವದೆಹಲಿ: ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಮರ್ಥಿಸಿಕೊಂಡಿದ್ದಾರೆ. ಅವರ ಹೇಳಿಕೆಗೆ ಯಾವುದೇ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ, ರಾಹುಲ್ ದೇಶದ ಜನರ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದೆ.
ಇಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಮಲ್ಲಿಕಾರ್ಜುನ್ ಖರ್ಗೆ ಅವರು, ರಾಹುಲ್ ಗಾಂಧಿ ಅವರು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ದೇಶದಲ್ಲಿ ಈಗಿನ ಪ್ರಜಾಪ್ರಭುತ್ವದ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ವಿದೇಶಗಳಲ್ಲಿ ಅನೇಕ ಸಲ ಈ ರೀತಿ ಮಾತನಾಡಿ ದೇಶವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿಯವರ ಹೇಳಿಕೆ ವಿರುದ್ಧ ಬಿಜೆಪಿಯ ಒತ್ತಾಯಕ್ಕೆ ಕಾಂಗ್ರೆಸ್ ಪಕ್ಷ ಮಣಿಯುವುದಿಲ್ಲ. ಈ ವಿಷಯದ ಬಗ್ಗೆ ಆಕ್ರಮಣಕಾರಿಯಾಗಿ ಮುಂದುವರಿಯುತ್ತೇವೆ. ಹಿಂಡೆನ್‌ಬರ್ಗ್-ಅದಾನಿ ವಿಷಯದ ಕುರಿತು ಜೆಪಿಸಿ ತನಿಖೆಯ ಬೇಡಿಕೆಯನ್ನು ಕೈಬಿಡುವ ಮಾತೇ ಇಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡು ಈ ಹಿಂದೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, "ಚೀನಾದಲ್ಲಿ ನಿಮ್ಮ ಹೇಳಿಕೆಯನ್ನು ನೆನಪಿಸಲು ಬಯಸುತ್ತೇನೆ. ನೀವೇ ಹೇಳಿದಂತೆ, "ಭಾರತೀಯರಾಗಿ ಹುಟ್ಟಿದ್ದಕ್ಕಾಗಿ ನಾಚಿಕೆಪಡುತ್ತೇನೆ. ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲವಾಗಿದೆ" ಎಂದು ಹೇಳಿಕೆ ನೀಡಿದ್ದೀರಿ. ಈಗ ನೀವು ದೇಶವನ್ನು ಪ್ರತಿನಿಧಿಸಲು ಹೆಮ್ಮೆ ಪಡುತ್ತೀರಿ" ಇದು ಭಾರತಕ್ಕೆ ಮತ್ತು ಭಾರತೀಯರಿಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದ್ದರು.
"ದಕ್ಷಿಣ ಕೊರಿಯಾದಲ್ಲಿ "ಹಿಂದಿನ ಜನ್ಮದಲ್ಲಿ ಮಾಡಿದ ಪಾಪದಿಂದಾಗಿ ಭಾರತದಲ್ಲಿ ಜನ್ಮ ತಾಳಿದ್ದೇವೆ ಎಂದು ಜನರು ಭಾವಿಸುತ್ತಿದ್ದಾರೆ ಎಂದು ಹೇಳಿದ್ದೀರಿ. ಇದೇನಾ ನೀವು ದೇಶವನ್ನು ಪ್ರೀತಿಸುವ ಬಗೆ. ಮೊದಲು ಸತ್ಯದ ಕನ್ನಡಿಯನ್ನು ನೋಡಿ. ಆಮೇಲೆ ಕಾಂಗ್ರೆಸ್ನವರಿಗೆ ಉಪನ್ಯಾಸ ನೀಡಿ ಎಂದು ತಿವಿದಿದ್ದರು.
ರಾಹುಲ್ ಕ್ಷಮೆ ಕೇಳಬೇಕು: ಇನ್ನೊಂದೆಡೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಬ್ರಿಟನ್ ಭಾಷಣದ ಬಗ್ಗೆ ಟೀಕಿಸಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸ್ಮೃತಿ ಇರಾನಿ, "ಭಾರತವನ್ನು ಗುಲಾಮಗಿರಿ ರಾಷ್ಟ್ರವನ್ನಾಗಿಸಿದ ದೇಶದಲ್ಲಿ ಕುಳಿತು, ಇಲ್ಲಿನ ಪ್ರಜಾಪ್ರಭುತ್ವವನ್ನು ರಾಹುಲ್ ಗಾಂಧಿ ಟೀಕಿಸುತ್ತಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗಳು ಮತ್ತು ಸಂಸ್ಥೆಗಳು ಗಟ್ಟಿಗೊಳ್ಳುವ ಸಂದರ್ಭದಲ್ಲಿ ಯಾವ ವಿದೇಶಿ ಶಕ್ತಿಗಳು ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
"ನಾನು ರಾಹುಲ್ ಗಾಂಧಿಯವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನೀವು ವಿದೇಶದಲ್ಲಿ ಹೇಳಿದಂತೆ, ದೇಶದ ಯಾವುದೇ ವಿಶ್ವವಿದ್ಯಾಲಯಗಳಿಗೆ ಈ ರೀತಿ ಹೋಗಿ ಮುಕ್ತವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದೀರಿ. ಇದು ಸತ್ಯವೇವಾದಲ್ಲಿ 2016 ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ 'ಭಾರತ್ ತೇರೆ ತುಕ್ದೇ ಹೋಂಗೆ' ಎಂಬ ದೇಶದ್ರೋಹಿ ಹೇಳಿಕೆ ಕೂಗಿದಾಗ, ನೀವು ಅಲ್ಲಿಗೆ ಹೋಗಿ ಏನು ಮಾಡಿದಿರಿ. ಅಲ್ಲಿಗೆ ನೀವು ಹೋಗಿದ್ದು, ಏಕೆ ಎಂದು ತಿಳಿಸಿ ಎಂದು ಪ್ರಶ್ನಿಸಿದರು.
ದೇಶದ ವಿರುದ್ಧ ಹೇಳಿಕೆ ನೀಡಿದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು. ಪ್ರಧಾನಿ ಮೋದಿ ಅವರ ಮೇಲಿನ ದ್ವೇಷಕ್ಕೆ ರಾಹುಲ್ ಲಂಡನ್‌ನಲ್ಲಿ ಕುಳಿತು ಪ್ರಜಾಪ್ರಭುತ್ವವನ್ನು ಅವಮಾನಿಸಿ, ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಓದಿ: ದೆಹಲಿಯತ್ತ ಸಚಿವ ಸೋಮಣ್ಣ ಪ್ರಯಾಣ: ಬಿಎಸ್ವೈ ವಿರುದ್ಧ ಪರೋಕ್ಷ ಅಸಮಾಧಾನ