ನವದೆಹಲಿ: ನ್ಯಾಷನಲ್ ಹೆರಾಲ್ಡ್ ಮೂಲಕ 2 ಸಾವಿರ ಕೋಟಿ ರೂಪಾಯಿ ಹಗರಣ ನಡೆದಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಈಗಾಗಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗು ರಾಹುಲ್ ಗಾಂಧಿ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದೆ. ಇದೀಗ ಪಕ್ಷದ ಹಿರಿಯ ಮುಖಂಡ ಹಾಗು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಕೂಡ ಸಂಸತ್ ಅಧಿವೇಶನ ನಡೆಯುತ್ತಿದ್ದಾಗಲೇ ಸಮನ್ಸ್ ನೀಡಿ ವಿಚಾರಣೆಗೆ ಕರೆದಿದೆ. ಈ ಹಿನ್ನೆಲೆಯಲ್ಲಿ ಖರ್ಗೆ ದೆಹಲಿಯಲ್ಲಿ ನಾಲ್ಕೂವರೆ ಗಂಟೆಗಳ ಕಾಲ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ.
ಇದನ್ನೂ ಓದಿ: ಅಧಿವೇಶನ ನಡೆಯುತ್ತಿದ್ದಾಗಲೇ ಮಲ್ಲಿಕಾರ್ಜುನ ಖರ್ಗೆಗೆ ಇಡಿ ಸಮನ್ಸ್: ಸಂಸತ್ನಲ್ಲಿ ವಾಗ್ವಾದ
ದೆಹಲಿಯಲ್ಲಿರುವ ಹೆರಾಲ್ಡ್ ಹೌಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಪ್ರತಿನಿಧಿಯಾಗಿದ್ದಾರೆ. ಈ ಹಿಂದೆಯೂ ಕೂಡ ಇವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ. ಇದೀಗ ಮತ್ತೊಮ್ಮೆ ವಿಚಾರಣೆ ಎದುರಿಸಿದ್ದಾರೆ. ನಿನ್ನೆಯಷ್ಟೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹೆರಾಲ್ಡ್ ಹೌಸ್ನ ಒಂದು ಭಾಗಕ್ಕೆ ಬೀಗಮುದ್ರೆ ಹಾಕಿದ್ದಾರೆ.