ಕೊಚ್ಚಿ: ಮಾಜಿ ಸಂಸದ ಹಾಗೂ ಮಲಯಾಳಂನ ಹಿರಿಯ ನಟ ಇನ್ನೋಸೆಂಟ್ (75) ಭಾನುವಾರ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾರ್ಚ್ 3 ರಿಂದ ಚಿಕಿತ್ಸೆ ಪಡೆಯುತ್ತಿದ್ದ ಇವರು ರಾತ್ರಿ 10.30 ಕ್ಕೆ ಇಹಲೋಕ ತ್ಯಜಿಸಿದ್ದಾರೆ.
"ಇನ್ನೋಸೆಂಟ್ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಉಸಿರಾಟದ ಸಮಸ್ಯೆ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕಾರಣ ಹೃದಯಾಘಾತವಾಗಿದೆ" ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಜನಪ್ರಿಯ ನಟನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖ ನಟ, ನಟಿಯರು ಮತ್ತು ರಾಜಕಾರಣಿಗಳು ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. "ಇನ್ನೋಸೆಂಟ್ ತಮ್ಮ ಸ್ವಾಭಾವಿಕ ನಟನೆಯಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಸಲಾಗದ ಸ್ಥಾನ ಉಳಿಸಿಕೊಂಡಿದ್ದಾರೆ. ಜನರ ಹೃದಯಕ್ಕೆ ಬಹಳ ಹತ್ತಿರವಾಗಿದ್ದ ಸಾರ್ವಜನಿಕ ಕಾರ್ಯಕರ್ತ. ಸದಾ ಎಡಪಂಥೀಯ ಮನೋಭಾವನೆ ಹೊಂದಿದ್ದು ಅವರು ಎಡ ಪ್ರಜಾಸತ್ತಾತ್ಮಕ ರಂಗದ ಕೋರಿಕೆಯ ಮೇರೆಗೆ ಲೋಕಸಭೆಯ ಅಭ್ಯರ್ಥಿಯಾದರು. ಗೆದ್ದ ನಂತರ ಸಂಸತ್ತಿನಲ್ಲಿ ಕೇರಳದ ಬೇಡಿಕೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಇನ್ನೋಸೆಂಟ್ ಸಾವಿನಿಂದ ಕಲೆ, ಸಂಸ್ಕೃತಿಗೆ ಮತ್ತು ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ನೆನೆದು ಕಣ್ಣೀರಿಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶ್ ಕೂಡ ಇನ್ನೋಸೆಂಟ್ ನಿಧನಕ್ಕೆ ಸಂತಾಪ ಸೂಚಿಸಿದ್ದು, "ದಶಕಗಳಿಂದ ಎಲ್ಲರನ್ನೂ ನಗಿಸುತ್ತಿದ್ದ ಇನ್ನೋಸೆಂಟ್ ಇಂದು ನಿಧನರಾಗಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಮಲಯಾಳಂ ಚಿತ್ರರಂಗದ ಪ್ರಮುಖ ಹಾಸ್ಯನಟರಲ್ಲಿ ಒಬ್ಬರು" ಎಂದಿದ್ದಾರೆ.
ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಟ್ವಿಟರ್‌ನಲ್ಲಿ ಸಂತಾಪ ಸೂಚಿಸುವ ಮೂಲಕ ದುಃಖ ತೋಡಿಕೊಂಡಿದ್ದಾರೆ. "ಮಲಯಾಳಂನ ದಿಗ್ಗಜ ನಟ ಮತ್ತು ಮಾಜಿ ಸಂಸದ ಇನ್ನೋಸೆಂಟ್ ನಿಧನದಿಂದ ತೀವ್ರ ದುಃಖವಾಗಿದೆ. ತೆರೆಯ ಮೇಲಿನ ಅವರ ಅಭಿನಯವು ಅಸಂಖ್ಯಾತ ಅಭಿಮಾನಿಗಳಿಗೆ ಸಂತೋಷ ನೀಡಿತ್ತು. ಸಂಸದರಾಗಿ ಮತದಾರರ ಕಲ್ಯಾಣಕ್ಕಾಗಿ ಹೋರಾಡಿದ್ದಾರೆ" ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಖುಷ್ಬೂ ಸುಂದರ್, ಪೃಥ್ವಿರಾಜ್ ಸುಕುಮಾರನ್, ಅವರ ಸಹೋದರ ಇಂದ್ರಜಿತ್, ಮಂಜು ವಾರಿಯರ್ ಮತ್ತು ಟೊವಿನೋ ಥಾಮಸ್ ಸೇರಿದಂತೆ ಅನೇಕ ಜನಪ್ರಿಯ ನಟರು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಂತಾಪ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಗೂ ಮುನ್ನ ಇನ್ಸ್ಟಾ ಲೈವ್ನಲ್ಲಿ ಕಣ್ಣೀರಿಟ್ಟಿದ್ದ ನಟಿ ಆಕಾಂಕ್ಷಾ ದುಬೆ
ಇನ್ನೋಸೆಂಟ್ ಅವರು ನಿರ್ಮಾಪಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದ್ದರು. 1972 ರಲ್ಲಿ ‘ನೃತಸಾಲ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ನಟನಾ ವೃತ್ತಿ ಪ್ರಾರಂಭಿಸಿದ್ದರು. ಇತ್ತೀಚೆಗೆ ಪೃಥ್ವಿರಾಜ್ ಅಭಿನಯದ 'ಕಡುವ' ಚಿತ್ರದಲ್ಲಿ ಸಹ ಬಣ್ಣ ಹಚ್ಚಿದ್ದರು. ಚಲನಚಿತ್ರ ನಿರ್ದೇಶಕ ಸತ್ಯನ್ ಅಂತಿಕಾಡ್ ಅವರ ಪುತ್ರ ಅನೂಪ್ ಸತ್ಯನ್ ನಿರ್ದೇಶನದ 'ಪಚುವುಂ ಅತ್ಬುತವಿಲಕ್ಕುಂ' (Pachuvum Atbuthavilakkum) ಅವರು ನಟಿಸಿದ ಕೊನೆಯ ಸಿನಿಮಾ.
ನಟನೆಯ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. 2014 ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಜಿಲ್ಲೆಯ ಚಾಲಕುಡಿ ಕ್ಷೇತ್ರದಿಂದ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಅಭ್ಯರ್ಥಿಯಾಗಿ ಚುನಾಯಿತರಾದರು. ಚಾಲಕುಡಿ ಸಂಸದರಾಗಿ ಸೇವೆ ಸಲ್ಲಿಸಿದ್ದ ಅವರು, ಚಲನಚಿತ್ರ ನಟರ ಸಂಘ ಅಮ್ಮನ ಅಧ್ಯಕ್ಷರಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದಾರೆ.