ಹರ್ದೋಯಿ(ಉತ್ತರಪ್ರದೇಶ): ನೊಣಗಳಿಂದ ರೋಗಗಳು ಬರುವುದರ ಬಗ್ಗೆ ಕೇಳಿರಬಹುದು. ಆದರೆ ನೊಣಗಳಿಂದಾಗಿ ಜನರ ಸಂಬಂಧಗಳು ಮುರಿದುಬೀಳುತ್ತಿವೆ ಎಂಬುದನ್ನು ನೀವು ಎಂದಾದರೂ ಉಹಿಸಿದ್ದೀರಾ? ಇದನ್ನೂ ಕೇಳಿ ತಮಗೆ ಆಶ್ಚರ್ಯವೆನಿಸಬಹುದು.. ಆದರೆ ಇದು ನಿತ್ಯಕ ನರಕಯಾತನೆಯ ಸತ್ಯ ದರ್ಶನ..
ಹೌದು, ಉತ್ತರಪ್ರದೇಶದ ಹರ್ದೋಯಿ ಜಿಲ್ಲೆಯ ಅಹಿರೋರಿ ಬ್ಲಾಕ್‌ನ 10 ಹಳ್ಳಿಗಳಲ್ಲಿ ಇಂಥ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಊರಿನಲ್ಲಿ ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡಲು ಆಗುತ್ತಿಲ್ಲ. ಇತ್ತೀಚೆಗೆ ಮದುವೆಯಾಗಿರುವ ಹೊಸ ಜೋಡಿಯ ಪತ್ನಿಯರೂ ಸಹ ಗಂಡನ ಮನೆ ತೊರೆದು ತವರು ಮನೆ ಸೇರಿದ್ದಾರೆ. ಹೀಗಾಗಿ ಗ್ರಾಮಸ್ಥರು ಚಿಂತಾಕ್ರಾಂತರಾಗಿದ್ದು, ನೊಣಗಳು ಜನರನ್ನು ಕೂರಲು, ಎದ್ದೇಳಲು, ತಿನ್ನಲು ಮತ್ತು ಕುಡಿಯಲೂ ಬಿಡುತ್ತಿಲ್ಲ. ಕ್ಷಣ ಕ್ಷಣಕ್ಕೂ ನೊಣಗಳು ಮುತ್ತಿಕೊಳ್ಳುತ್ತಿವೆ. ಇದರಿಂದ ಜನರ ನಿತ್ಯ ಜೀವನ ಹೈರಾಣಾಗಿದೆ.
ಅಹಿರೋರಿ ಬ್ಲಾಕ್‌ನ 10 ಹಳ್ಳಿಗಳ ಗ್ರಾಮದ ಹುಡುಗರಿಗೆ ಬೇರೆ ಊರಿನವರು ಹೆಣ್ಣು ಕೊಡಲು ಹಿಂಜರಿಯುತ್ತಿದ್ದಾರೆ. ಹಿಂದಿನ ವರ್ಷ ಏಳು ಮದುವೆಗಳೂ ಜರುಗಿದ್ದು, ಅದರಲ್ಲಿ ನಾಲ್ವರು ಹೆಣ್ಣುಮಕ್ಕಳ ಮತ್ತು ಮೂವರು ಗಂಡುಮಕ್ಕಳ ಮದುವೆಯಾಗಿದೆ. ಆದರೆ ಈ ಬಾರಿ ಮದುವೆ ಸೀಸನ್ ನಲ್ಲಿ ಗ್ರಾಮದಲ್ಲಿ ಇದುವರೆಗೂ ಒಂದೇ ಒಂದು ಕಲ್ಯಾಣ ಕಾರ್ಯ ನಡೆದಿಲ್ಲವಂತೆ.
ಪ್ರತಿರಾತ್ರಿಯೂ ನಿದ್ರಾಭಂಗ: ನೊಣಗಳಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಮಲಗಲು ಹೋದ ತಕ್ಷಣ ನೊಣಗಳು ಕಚ್ಚಲು ಪ್ರಾರಂಭಿಸುತ್ತವೆ. ನಿದ್ರೆಗೂ ಬಿಡುವುದಿಲ್ಲ.. ಪ್ರತಿನಿತ್ಯವೂ ನಿದ್ರಾಭಂಗಗೊಳಿಸುತ್ತಿದ್ದು, ಜನರ ಪ್ರಾಣ ಹಿಂಡುತ್ತಿವೆ. ನೊಣಗಳ ಕಾಟದಿಂದ ಇಲ್ಲಿ ಯಾರೂ ಮಕ್ಕಳ ಮದುವೆ ಮಾಡಲು ಮುಂದಾಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಜಯ್ ವರ್ಮಾ.
ತವರು ಮನೆ ಬಿಟ್ಟು ಬರದ ಪತ್ನಿಯರು: ಇದಲ್ಲದೇ ಗ್ರಾಮದ ಹಲವು ಮಹಿಳೆಯರು ಹೇಳುವ ಪ್ರಕಾರ.., ನೊಣಗಳ ಹಾವಳಿ ವಿಪರೀತವಾಗಿದ್ದು ಹೆದರಿ ಹೆಂಡತಿಯರು ತವರು ಮನೆಗೆ ಅನಿವಾರ್ಯವಾಗಿ ಹೋಗಬೇಕಾಗಿದೆ. ತಾಯಿಯ ಮನೆಗೆ ಹೋದವರು ಎಷ್ಟೇ ಬಲವಂತವಾಗಿ ಒತ್ತಾಯಿಸಿದರೂ, ಗಂಡನ ಮನೆಗೆ ಬರಲು ತಯಾರಿಲ್ಲ. ಹೀಗಾಗಿ ಅವರ ಸಂಬಂಧಗಳು ಮುರಿದು ಬೀಳುವ ಹಂತದಲ್ಲಿವೆ.
ಕೋಳಿ ಫಾರ್ಮ್ ಬೆಳೆದಂತೆ ತೊಂದರೆ: 2014 ರಲ್ಲಿ ವಾಣಿಜ್ಯ ಉದ್ದೇಶದಿಂದ ಕೋಳಿ ಫಾರಂ ಅನ್ನು ಇಲ್ಲಿ ಸ್ಥಾಪಿಸಲಾಯಿತು. ನಂತರ 2017 ರಲ್ಲಿ ಉತ್ಪಾದನೆ ಪ್ರಾರಂಭವಾಯಿತು. ಪ್ರತಿದಿನ ಒಂದೂವರೆ ಲಕ್ಷ ಕೋಳಿ ಮೊಟ್ಟೆ ಉತ್ಪಾದನೆಯಾಗುತ್ತಿತ್ತು. ಫಾರ್ಮ್ ತೆರೆದ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ನಂತರ ಕ್ರಮೇಣ ನೊಣಗಳ ಸಂಖ್ಯೆಯೂ ಹೆಚ್ಚಾಗಲು ಪ್ರಾರಂಭಿಸಿತು. ನೊಣಗಳ ಕಾಟ ವಿರೋಧಿಸಿ ಸ್ಥಳೀಯರು ಉಗ್ರ ಪ್ರತಿಭಟನೆ ಮಾಡಿದರು. ಸ್ಥಳೀಯ ಆಡಳಿತಕ್ಕೆ ದೂರು ನೀಡಿದಾಗ, ಪರಿಸರ ಇಲಾಖೆ ಅಧಿಕಾರಿಗಳು ಸುಳ್ಳು ನೆಪ ಹೇಳಿ ನುಣುಚಿಕೊಂಡರಂತೆ. ಈಗ ನೊಣಗಳ ಕಾಟದಿಂದ ಪರಿಸ್ಥಿತಿ ಹದಗೆಟ್ಟಿದೆಯಂತೆ.
ಅಹಿರೋರಿ ಬ್ಲಾಕ್‌ನ 10 ಗ್ರಾಮಗಳಲ್ಲಿ ನೊಣಗಳ ಹಾವಳಿ ಉತ್ತುಂಗಕ್ಕೇರಿದೆ. ನೊಣಗಳ ಕಾಟದಿಂದ ಬದಯ್ಯನಪುರ ಗ್ರಾಮದ ಜನರು ತೊಂದರೆಗೀಡಾಗಿದ್ದಾರೆ. ಕಳೆದ ವರ್ಷದಲ್ಲಿ ಅನೇಕ ಮಹಿಳೆಯರು ಮನೆ ತೊರೆದಿದ್ದಾರೆ. ಕುಯಿಯಾ, ಪಟ್ಟಿ, ದಹಿ, ಸೇಲಂಪುರ, ಫತೇಪುರ್, ಝಲ್ ಪೂರ್ವ, ನಯಾ ಗಾಂವ್, ಡಿಯೋರಿಯಾ ಮತ್ತು ಏಕಘರಾದಲ್ಲಿ ವಾಸಿಸುವ ಜನರಿಗೂ ನೊಣಗಳು ಬೆನ್ನುಬಿದ್ದು ಕಾಡುತ್ತಿವೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ನೊಣದ ಕಾಟ ಕಡಿಮೆ ಮಾಡಲು ಕ್ರಮ ಕೈಗೊಂಡು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಬೇಕಿದೆ.
ಇದನ್ನೂಓದಿ:ಪೀಲೆಗೆ ಎದುರಾದ ಆರೋಗ್ಯ ಸಮಸ್ಯೆ; ಕರುಳಿನ ಕ್ಯಾನ್ಸರ್ನಿಂದ ಪಾರಾಗುವುದು ಹೇಗೆ