ಚೆನ್ನೈ (ತಮಿಳುನಾಡು): ಪಂಚ ರಾಜ್ಯಗಳ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಎಲ್ಲ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ಬೆನ್ನಲ್ಲೇ ನಟ ಕಮಲ್ ಹಾಸನ್ ತಾವು ಸ್ಫರ್ಧಿಸಲಿರುವ ಕ್ಷೇತ್ರವನ್ನ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಕ್ಕಳ್ ನೀಧಿ ಮೈಯಂ ಪಕ್ಷದ ಸ್ಥಾಪಕ ಕಮಲ್ ಹಾಸನ್, ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.
ಮಕ್ಕಳ್ ನೀಧಿ ಮೈಯಂ ಪಕ್ಷವು 154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ 80 ಸ್ಥಾನಗಳಲ್ಲಿ, ಎಂಎನ್ಎಂ ಮೈತ್ರಿಗಳಾದ ಅಖಿಲ ಭಾರತ ಸಮತುವಾ ಮಕ್ಕಳ್ ಕಚ್ಚಿ (AISMK) ಆರ್. ಸರಥ್‌ಕುಮಾರ್ ಮತ್ತು ಟಿ.ಆರ್. ಪರಿವೇಂದ್ರರ ಇಂಧಿಯಾ ಜನನಾಯಾಗ ಕಚ್ಚಿ (IJK)- ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ 234 ಸ್ಥಾನಗಳಿಗೆ ಮತದಾನ ನಡೆಯಲಿದೆ.