ತೆನಾಲಿ(ಆಂಧ್ರಪ್ರದೇಶ): ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕ್ರೇಜ್ ಎಂಥಾದ್ದು ಅಂತ ಬಿಡಿಸಿ ಹೇಳೋದೇ ಬೇಕಾಗಿಲ್ಲ. ಅವರು ನಮ್ಮನ್ನು ಅಗಲಿ ಎರಡು ತಿಂಗಳು ಕಳೆದರೂ ಅವರ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಕರ್ನಾಟಕ ಮಾತ್ರವಲ್ಲ ಪಕ್ಕದ ರಾಜ್ಯಗಳಲ್ಲೂ ಅವರಿಗೆ ಸಾವಿರಾರು ಅಭಿಮಾನಿಗಳಿದ್ದಾರೆ. ಇದಕ್ಕೆ ಸಾಕ್ಷಿ ಎಂಬ ರೀತಿಯಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಕನ್ನಡದ ಸೂಪರ್ ಸ್ಟಾರ್ ಪುನೀತ್ ಅವರ ಏಳು ಅಡಿಗಳ ಎತ್ತರದ ಅನೇಕ ಪ್ರತಿಮೆಗಳು ನಿರ್ಮಾಣಗೊಂಡಿವೆ.
ಗುಂಟೂರು ಜಿಲ್ಲೆಯ ತೆನಾಲಿಯಲ್ಲಿರುವ ಸೂರ್ಯ ಶಿಲ್ಪ ಶಾಲೆಯಲ್ಲಿ ಏಳು ಅಡಿ ಎತ್ತರದ ಭವ್ಯವಾದ ಹತ್ತಾರು ಪ್ರತಿಮೆ ನಿರ್ಮಾಣಗೊಂಡಿದ್ದು, ನೋಡಲು ನಿಜಕ್ಕೂ ಅದ್ಭುತವಾಗಿವೆ. ಕಂಚು ಹಾಗೂ ಇತರ ಪ್ರತಿಮೆಗಳು ಕಾಟೂರಿ ರವಿಚಂದ್ರ ಕೈ ಚಳಕದಲ್ಲಿ ಅರಳಿ ನಿಂತಿವೆ.
ಇದನ್ನೂ ಓದಿರಿ: ಜ.26ರಿಂದ ಪೆಟ್ರೋಲ್ ಮೇಲೆ 25ರೂ. ಕಡಿತ.. ಷರತ್ತು ಅನ್ವಯ
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರವಿಚಂದ್ರ ಅವರು, ಪುನೀತ್ ರಾಜ್ ಕುಮಾರ್ ಅವರ ಅಕಾಲಿನ ನಿಧನದಿಂದ ತುಂಬಾ ದುಃಖಿತನಾಗಿದ್ದೇನೆ. ಅವರ ಮೇಲಿನ ಅಭಿಮಾನದಿಂದಾಗಿ ನಾನಾ ಕಡೆಯಿಂದ ಪ್ರತಿಮೆಗಳಿಗೆ ದೊಡ್ಡ ಮಟ್ಟದ ಆರ್ಡರ್ ಬಂದಿದ್ದು, ಈ ಪ್ರತಿಮೆಗಳು ಶೀಘ್ರದಲ್ಲೇ ಕರ್ನಾಟಕದಲ್ಲಿ ಪ್ರದರ್ಶನಗೊಳ್ಳಲಿವೆ ಎಂದಿದ್ದಾರೆ.
ಸೂರ್ಯ ಶಿಲ್ಪ ಶಾಲೆಯ ವ್ಯವಸ್ಥಾಪಕರಾದ ವೆಂಕಟೇಶ್ವರ್ ರಾವ್ ಮಾತನಾಡಿ, 3ಡಿ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಮೂರ್ತಿ ತಯಾರಿಸಲಾಗಿದೆ. ಕಂಚು, ಫೈಬರ್ ಮತ್ತು ಹಳೆಯ ಕಬ್ಬಿಣದ ಸಹಾಯದಿಂದ ಇವುಗಳ ನಿರ್ಮಾಣ ಮಾಡಲಾಗಿದೆ ಎಂದರು.