ವಾರಣಾಸಿ (ಉತ್ತರ ಪ್ರದೇಶ): ಗಂಗಾ ಸ್ನಾನವನ್ನು ಅತ್ಯಂತ ಪವಿತ್ರ ಸ್ನಾನವೆಂದು ಪರಿಗಣಿಸಲಾಗುತ್ತದೆ. ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಮತ್ತು ಪುರಾಣಗಳಲ್ಲಿ ಹೇಳಲಾಗಿದೆ. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಗಂಗಾ ನದಿಯಲ್ಲಿ ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಿದರು.
ಮಕರ ಸಂಕ್ರಾಂತಿಯ ದಿನ ಪವಿತ್ರ ನದಿ ಸ್ನಾನಕ್ಕೆ ಬಹಳ ಮಹತ್ವವಿದೆ. ಈ ದಿನದಂದು ಗಂಗಾ ಸ್ನಾನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ಇದೆ. ಗಂಗಾ ನದಿಗೆ ಭಾರತದಲ್ಲಿ ಬಹಳ ಪವಿತ್ರ ಸ್ಥಾನವಿದ್ದು, ಹಾಗಾಗಿ, ಇಂದು ಸಾಕಷ್ಟು ಮಂದಿ ಗಂಗಾ ನದಿಯಲ್ಲಿ ಮಿಂದು ಭಕ್ತಿ ಭಾವ ಮೆರೆಯುತ್ತಿದ್ದಾರೆ.
ಹಬ್ಬದ ನಿಮಿತ್ತವಾಗಿ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಸಾವಿರಾರು ಭಕ್ತರು ನದಿಯತ್ತ ಹರಿದು ಬರುತ್ತಿದ್ದಾರೆ. ಇಂದು ಬೆಳಿಗ್ಗೆ ವಾರಣಾಸಿ ಘಾಟ್‌ಗಳಲ್ಲಿ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಸರತಿ ಸಾಲಿನಲ್ಲಿ ಅಪಾರ ಜನಸ್ತೋಮ ನಿಂತಿರುವ ದೃಶ್ಯ ಕಂಡುಬಂದಿತು. ಜೊತೆಗೆ ಪ್ರವಾಸಿಗರು ಸುರಕ್ಷಿತವಾಗಿ ಸ್ನಾನ ಮಾಡುವುದಕ್ಕೆ ಸಕಲ ಸಿದ್ಧತೆ ಏರ್ಪಡಿಸಲಾಗಿದೆ. ಸ್ನಾನದ ಕುಂಡಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಗಂಗಾಸಾಗರ ಮೇಳದಲ್ಲಿ ಪವಿತ್ರ ಸ್ನಾನ ಮಾಡಲು ದೇಶದ ವಿವಿಧ ಭಾಗಗಳಿಂದ ಹಲವಾರು ಹಿಂದೂ ಭಕ್ತರು ಮತ್ತು ನಾಗಾ ಸಾಧುಗಳು ಕೋಲ್ಕತ್ತಾದ ಬಾಬು ಘಾಟ್‌ನಲ್ಲಿ ಸೇರಿದ್ದಾರೆ.
ಇದನ್ನೂ ಓದಿ: ಮಕರ ಸಂಕ್ರಾಂತಿ ಸಂಭ್ರಮ : ಕಾಶಿಯ ಗಂಗೆಯಲ್ಲಿ ಪುಣ್ಯಸ್ನಾನಕ್ಕೆ ಸೇರಿದ ಭಕ್ತರ ದಂಡು
ಮಕರ ಸಂಕ್ರಾಂತಿ ವಿಶೇಷತೆ: ಮಕರ ಸಂಕ್ರಾಂತಿಯು ಹಿಂದೂಗಳ ಹಬ್ಬ. ಈ ಹಬ್ಬವನ್ನು ಭಕ್ತರು ಸೂರ್ಯ ದೇವರಿಗೆ ಅರ್ಪಣೆ ಮಾಡುತ್ತಾರೆ. ಸೂರ್ಯ ದೇವನು ಮಕರ ರಾಶಿಗೆ ಪ್ರವೇಶಿಸುವ ಸುಸಂದರ್ಭವಿದು. ಇಲ್ಲಿಂದ ಉತ್ತರಾಯಣ ಪುಣ್ಯಕಾಲ ಶುರುವಾಗುತ್ತದೆ. ಸಂಕ್ರಾಂತಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನ ಪರಿವರ್ತನೆಯನ್ನು ಸೂಚಿಸುವ ವರ್ಷದ ಅತ್ಯಂತ ಮಂಗಳಕರ ಸಮಯಗಳಲ್ಲಿ ಒಂದಾದ ಮಕರ ಸಂಕ್ರಾಂತಿಯನ್ನು ಪ್ರತಿ ವರ್ಷ ಜನವರಿ 14 ರಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಸಂಕ್ರಾತಿ, ಪೊಂಗಲ್, ಬಿಹು ಮತ್ತು ಮಾಘಿ ಎಂದು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ಇದನ್ನೂ ಓದಿ: ಮಕರ ಸಂಕ್ರಾಂತಿ ಸಂಭ್ರಮ... ಹಬ್ಬದ ವಿಶೇಷತೆ ಹೆಚ್ಚಿಸುವ ಆರೋಗ್ಯಕರ ಆಹಾರ ಪದಾರ್ಥಗಳು ಯಾವವು ಗೊತ್ತಾ?
ಕರ್ನಾಟಕದಲ್ಲಿ ಹೇಗಿರುತ್ತೆ ಆಚರಣೆ: ರೈತರು ಈ ದಿನದಂದು ಜಾನುವಾರುಗಳಿಗೆ ಮೈತೊಳೆದು, ಸಿಂಗರಿಸಿ ಮೆರವಣಿಗೆ ಮಾಡಿ, ಸಂಜೆ ಊರ ಒಂದು ಬೀದಿಯ ದಾರಿಯಲ್ಲಿ ಕಿಚ್ಚು ಹಾಯಿಸುತ್ತಾರೆ. ಎಳ್ಳಿನ ಹಬ್ಬವೆಂದು ಪ್ರಸಿದ್ಧವಾದ ಈ ದಿನದಂದು, ನಾನಾ ರೂಪಗಳಲ್ಲಿ ಎಳ್ಳನ್ನು ಬಳಸುವುದಲ್ಲದೆ, ಪೀಡಾ ಪರಿಹಾರಾರ್ಥವಾಗಿ ಎಳ್ಳನ್ನು ಹಾಗೂ ಎಳಚಿ ಹಣ್ಣನ್ನು ಸುರಿಯುತ್ತಾರೆ. ಪುರಾಣಗಳ ಪ್ರಕಾರ, ಈ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚುತ್ತಾರೆ. ಆಂಧ್ರದಲ್ಲಿ ಈ ದಿನ ಶ್ರೀರಾಮನ ಪೂಜೆಯನ್ನು ಮಾಡುತ್ತಾರೆ. ತಮಿಳುನಾಡಿನಲ್ಲಿ ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿಸಿದ ಒಲೆಯಲ್ಲಿ ಬೆಲ್ಲ, ಅಕ್ಕಿ, ತುಪ್ಪದಿಂದ ಪೊಂಗಲ್ ತಯಾರಿಸಿ ಹಬ್ಬವನ್ನು ಸಂಭ್ರಮಿಸುತ್ತಾರೆ.