ಮಧುರೈ (ತಮಿಳುನಾಡು): ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ ದುರಂತದಲ್ಲಿ ಸಾವನ್ನಪ್ಪಿದ ಆರ್ಮಿ ಏವಿಯೇಷನ್‌ನ ಮೇಜರ್ ಜಯಂತ್.ಎ ಅವರ ಪಾರ್ಥಿವ ಶರೀರಕ್ಕೆ ಮಧುರೈನಲ್ಲಿ ಅಂತಿಮ ನಮನ ಸಲ್ಲಿಕೆ ಮಾಡಲಾಯಿತು. ಭಾರತೀಯ ಸೇನೆಯ ಅಧಿಕಾರಿಗಳು ಮೇಜರ್ ಜಯಂತ್ ಮೃತ ದೇಹಕ್ಕೆ ವಿಮಾನ ನಿಲ್ದಾಣದಲ್ಲಿ ಗೌರವ ಸಲ್ಲಿಸಿದರು. ಇತ್ತ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಅವರಿಗೆ ಅಸ್ಸಾಂನ ತೇಜ್‌ಪುರದಲ್ಲಿ ಸರ್ಕಾರಿ ಗೌರವಗಳೊಂದಿಗೆ ಕಣ್ಣೀರಿನ ವಿದಾಯ ಹೇಳಲಾಯಿತು. ಇಬ್ಬರು ಸೇನಾ ಅಧಿಕಾರಿಗಳು ಗುರುವಾರ ಅರುಣಾಚಲ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿತ್ತು.
ನಿವೃತ್ತಿಗೆ 2 ವರ್ಷ ಬಾಕಿ: ಮೇಜರ್ ಜಯಂತ್ ಅವರ ಅಂತ್ಯಕ್ರಿಯೆ ಥೇಣಿ ಜಿಲ್ಲೆಯ ಪೆರಿಯಾಕುಲಂ ಬಳಿಯ ಅವರ ಹುಟ್ಟೂರು ಜಯಮಂಗಲಂನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಮಧುರೈನಲ್ಲಿ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪಡೆದ ಜಯಂತ್ ರಾಷ್ಟ್ರೀಯ ವಿದ್ಯಾರ್ಥಿ ಪಡೆ ಆರ್ಮಿ ವಿಂಗ್‌ನಲ್ಲಿ ತರಬೇತಿ ಪಡೆದಿದ್ದರು. ಮತ್ತು ಅಂಡರ್ ಆಫೀಸರ್ ಶ್ರೇಣಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದಿದ್ದರು. ರಾಷ್ಟ್ರೀಯ ವಿದ್ಯಾರ್ಥಿ ಪಡೆ ಆರ್ಮಿ ವಿಂಗ್‌ನಲ್ಲಿ ಸಿ ಪ್ರಮಾಣ ಪತ್ರವನ್ನು ಸಹ ಪಡೆದಿದ್ದರು. ನಿವೃತ್ತಿಗೆ ಎರಡು ವರ್ಷ ಬಾಕಿ ಇರುವಾಗ ಗುರುವಾರ ಹೆಲಿಕಾಪ್ಟರ್ ಅಪಘಾತದಲ್ಲಿ ಅವರ ಸಾವು ಕುಟುಂಬವನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದೆ.
ಮಾ.16 ರಂದು ಅರುಣಾಚಲ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿದ್ದಾಗ ಕರ್ತವ್ಯದಲ್ಲಿರುವಾಗಲೇ ಪ್ರಾಣ ತ್ಯಾಗ ಮಾಡಿದ ಆರ್ಮಿ ಏವಿಯೇಷನ್‌ನ ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಮತ್ತು ಮೇಜ್ ಜಯಂತ್ ಎ ಅವರ ಪಾರ್ಥಿವ ಶರೀರಕ್ಕೆ ತೇಜ್‌ಪುರದಲ್ಲಿ ಮಿಲಿಟರಿ ಗೌರವ ನಮನ ಸಲ್ಲಿಸಲಾಯಿತು ಎಂದು ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.
ಗುವಾಹಟಿ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್, ಅಧಿಕಾರಿಗಳು ರಾಷ್ಟ್ರಕ್ಕೆ ಅವಿರತ ಸೇವೆ ಸಲ್ಲಿಸಿದ್ದಕ್ಕಾಗಿ ದೇಶದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಪಾರ್ಥಿವ ಶರೀರವನ್ನು ವಿಶೇಷ ಸೇನಾ ವಿಮಾನದಲ್ಲಿ ಅವರ ಸ್ವಗ್ರಾಮಗಳಾದ ಯಾದಾದ್ರಿ (ಹೈದರಾಬಾದ್ ಬಳಿ) ತೆಲಂಗಾಣ ಮತ್ತು ತಮಿಳುನಾಡಿನ ಮಧುರೈಗೆ ಸ್ಥಳಾಂತರಿಸಲಾಗಿದೆ ಎಂದು ಅದು(ಸೇನೆ) ತಿಳಿಸಿದೆ.
ಇನ್ನು ಹೈದರಾಬಾದ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ವಿಜಯ್ ಭಾನು ರೆಡ್ಡಿ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಲೆಫ್ಟಿನೆಂಟ್ ಕರ್ನಲ್ ವಿಜಯ್ ಭಾನು ರೆಡ್ಡಿ ಅವರ ತಂದೆ ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು.
ಸಂತಾಪ ಸೂಚಿಸಿದ ಸಿಎಂ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮೇಜರ್ ಜಯಂತ್ ಎ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಅಧಿಕಾರಿಯ ಶೌರ್ಯಕ್ಕೆ ವಂದನೆ ಮತ್ತು ದುಃಖಿತ ಕುಟುಂಬಕ್ಕೆ ನನ್ನ ಸಾಂತ್ವನ ಎಂದು ಹೇಳಿದ್ದಾರೆ.
ಘಟನೆಯ ಹಿನ್ನೆಲೆ: ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಕಾರ್ಯಾಚರಣೆಗಾಗಿ ಹಾರಾಟ ನಡೆಸುತ್ತಿದ್ದ ಆರ್ಮಿ ಏವಿಯೇಷನ್ ಚೀತಾ ಹೆಲಿಕಾಪ್ಟರ್ ಗುರುವಾರ ರಾಜ್ಯದ ಮಂಡಲ ಬೆಟ್ಟಗಳ ಪ್ರದೇಶದ ಬಳಿ ಪತನಗೊಂಡಿತ್ತು. ಗುರುವಾರ ಬೆಳಗ್ಗೆ 9.15ರ ಸುಮಾರಿಗೆ ಹೆಲಿಕಾಪ್ಟರ್ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕ ಕಳೆದುಕೊಂಡಿತ್ತು ಎಂದು ಮೊದಲು ವರದಿಯಾಗಿತ್ತು. ಆ ಬಳಿಕ ಘಟನೆಯಲ್ಲಿ ಇಬ್ಬರೂ ಪೈಲಟ್ಗಳು ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿತ್ತು.
ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ಗಳ ಸಾವು