ನವ ದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಫೆನಿ ನದಿಯ ಮೇಲೆ ಕಟ್ಟಲಾಗಿರುವ 'ಮೈತ್ರಿ ಸೇತು' ಸಂಪರ್ಕ ಸೇತುವೆಯನ್ನು ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ‘ಮೈತ್ರಿ ಸೇತು’ ಎಂಬ ಹೆಸರು ಉಭಯ ದೇಶಗಳ ಸ್ನೇಹ ಸಂಬಂಧದ ಚಿಹ್ನೆಯಾಗಿದೆ ಎಂದರು.
ನಂತರ ಮಾತನಾಡಿದ ಬಾಂಗ್ಲಾದೇಶ ಪ್ರಧಾನಿ ಶೇಖ ಹಸೀನಾ, ಇದೊಂದು ಐತಿಹಾಸಿಕ ಕ್ಷಣ. ಭಾರತದೊಂದಿಗೆ ಸಂಪರ್ಕವನ್ನು ಹೊಂದುವುದರ ಮೂಲಕ ದಕ್ಷಿಣ ಏಷ್ಯಾದಲ್ಲಿ ಹೊಸ ಕ್ರಾಂತಿಯನ್ನು ಆರಂಭಿಸುತ್ತಿದ್ದೇವೆ. ಭಾರತ ಹಾಗೂ ನೆರೆಯ ಬಾಂಗ್ಲಾದೇಶದ ನಡುವೆ ಕಟ್ಟಲಾಗಿರುವ ಈ ಸೇತುವೆಯನ್ನು ‘ಮೈತ್ರಿ ಸೇತು’ ಎಂದು ಹೆಸರಿಸಲಾಗಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸಂಪರ್ಕ ಬಲ ಪಡಿಸಲು, ನೆರೆಯ ದೇಶವನ್ನು ಪ್ರೋತ್ಸಾಹಿಸಲು, ವಿಶೇಷವಾಗಿ ಭಾರತದ ಈಶಾನ್ಯ ರಾಜ್ಯಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೇಳಿದರು.
ಇನ್ನು ಭಾರತ-ಬಾಂಗ್ಲಾದೇಶ ಸಂಪರ್ಕಿಸುವ ಮೈತ್ರಿ ಸೇತು, 1.9 ಕಿ.ಮೀ. ಉದ್ದವಿದೆ. ಸೇತುವೆ ಭಾರತದ ಸಬ್ರೂಮ್‌ನಿಂದ ಬಾಂಗ್ಲಾದೇಶದ ರಾಮ್ಘರ್ ಸಂಪರ್ಕಿಸಲಿದೆ. ಈ ಸೇತುವೆಯ ಮೂಲಕ, ಭಾರತ ಹಾಗೂ ಬಾಂಗ್ಲಾದೇಶ ನಡುವೆ ವ್ಯಾಪಾರ, ಜನಸಂಪರ್ಕ ಹೆಚ್ಚಲಿದೆ. ಹೊಸ ಮಾರುಕಟ್ಟೆ ಅವಕಾಶಗಳು, ಈಶಾನ್ಯ ರಾಜ್ಯಗಳ ಉತ್ಪನ್ನಗಳಿಗೆ ಮಾರಾಟ ಅವಕಾಶ, ಸರಕು ಸಾಗಾಟವೂ ಸುಲಭ ಸಾಧ್ಯವಾಗಲಿದೆ. ಜೊತೆಗೆ ದಕ್ಷಿಣ ಅಸ್ಸಾಂ, ತ್ರಿಪುರ ಮತ್ತು ಮಣಿಪುರ, ಸಬ್ರೂಮ್‌ನಿಂದ ಕೆಲ ಟ್ರಕ್ಗಳು ಸಂಚರಿಸಲು ಅನುಕೂಲವಾಗುತ್ತಿದೆ.
ಇನ್ನು ಮಾರ್ಚ್ 26 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.