ನವದೆಹಲಿ: 2021ರಲ್ಲಿ ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯ ಮಹಾರಾಷ್ಟ್ರ. ಆತ್ಮಹತ್ಯೆ ಪ್ರಕರಣಗಳಲ್ಲಿ ತಮಿಳುನಾಡು ಮತ್ತು ಮಧ್ಯಪ್ರದೇಶ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಸುಸೈಡ್ ಪ್ರಕರಣದಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ಭಾರತದಾದ್ಯಂತ 1,64,033 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚಿನ ವರದಿ ಪ್ರಕಾರ ಈ ಅಂಕಿ - ಅಂಶಗಳು ಬಹಿರಂಗವಾಗಿವೆ. ವೃತ್ತಿ ಅಥವಾ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು, ಪ್ರತ್ಯೇಕತೆಯ ಭಾವನೆಗಳು, ನಿಂದನೆ, ಹಿಂಸಾಚಾರ, ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಅಸ್ವಸ್ಥತೆ, ಮದ್ಯದ ಚಟ ಮತ್ತು ಆರ್ಥಿಕ ನಷ್ಟಗಳು ದೇಶದಲ್ಲಿ ಆತ್ಮಹತ್ಯೆ ಘಟನೆಗಳಿಗೆ ಪ್ರಮುಖ ಕಾರಣಗಳಾಗಿವೆ.
ಭಾರತದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ: 2020 ರಲ್ಲಿ ಭಾರತದಲ್ಲಿ ಒಟ್ಟು 1,53,052 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಆದರೆ, 2021 ರಲ್ಲಿ ಒಟ್ಟು 1,64,033 ಪ್ರಕರಣಗಳು ದಾಖಲಾಗಿವೆ ಎಂದು ವರದಿ ಹೇಳಿದೆ. ಆತ್ಮಹತ್ಯೆ ಪ್ರಮಾಣ ಶೇ.6.2ರಷ್ಟು ಹೆಚ್ಚಾಗಿದೆ ಎಂದು ಎನ್‌ಸಿಆರ್‌ಬಿ ತಿಳಿಸಿದೆ. ಎನ್‌ಸಿಆರ್‌ಬಿ 2021 ವರದಿಯ ಪ್ರಕಾರ, ಮಹಾರಾಷ್ಟ್ರದಲ್ಲಿ 22,207 ಆತ್ಮಹತ್ಯೆಗಳು ವರದಿಯಾಗಿವೆ.
ಇದರ ನಂತರ ತಮಿಳುನಾಡು 18,925, ಮಧ್ಯಪ್ರದೇಶ 14,965, ಪಶ್ಚಿಮ ಬಂಗಾಳ 13,500 ಮತ್ತು ಕರ್ನಾಟಕ ರಾಜ್ಯದಲ್ಲಿ ಸುಮಾರು 13,056 ಪ್ರಕರಣಗಳು ದಾಖಲಾಗಿವೆ. ಶೇಕಡಾವಾರು ನೋಡೊದಾದ್ರೆ ಮಹಾರಾಷ್ಟ್ರ ಶೇ 13.5, ತಮಿಳುನಾಡು ಶೇ11.5, ಮಧ್ಯಪ್ರದೇಶ ಶೇ9.1, ಪಶ್ಚಿಮ ಬಂಗಾಳ ಶೇ 8.2 ಮತ್ತು ಕರ್ನಾಟಕ ಶೇ 8 ನಷ್ಟಿದೆ.
ಓದಿ: 2020ರಲ್ಲಿ ಕೋಮು ಗಲಭೆ ಪ್ರಕರಣಗಳು ದ್ವಿಗುಣ: NCRB ವರದಿ
ಯೋಗಿ ರಾಜ್ಯದಲ್ಲಿ ಕಡಿಮೆ ಪ್ರಕರಣ ದಾಖಲು : ಈ ಐದು ರಾಜ್ಯಗಳು ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ 50.4 ಪ್ರತಿಶತವನ್ನು ಹೊಂದಿವೆ. ಉಳಿದ 49.6 ಪ್ರತಿಶತ ಪ್ರಕರಣಗಳು ಇತರ 23 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳು ಹಂಚಿಕೊಂಡಿವೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶವು ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯ ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿದೆ.
ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ದೆಹಲಿಯು 2021 ರಲ್ಲಿ ಅತಿ ಹೆಚ್ಚು 2,840 ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿದೆ. ಇದಾದ ನಂತರ ಪುದುಚೇರಿಯಲ್ಲಿ 504 ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ದೇಶದ 53 ಪ್ರಮುಖ ನಗರಗಳಲ್ಲಿ ಒಟ್ಟು 25,891 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
2021 ರಲ್ಲಿ ದೇಶದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಆತ್ಮಹತ್ಯೆ ಪ್ರಕರಣಗಳ ರಾಷ್ಟ್ರೀಯ ದರ 12 ಆಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತಿ ಹೆಚ್ಚು ಆತ್ಮಹತ್ಯೆ (39.7) ದಾಖಲಾಗಿದೆ. ಸಿಕ್ಕಿಂ (39.2), ಪುದುಚೇರಿ (31.8), ತೆಲಂಗಾಣ (26.9) ಮತ್ತು ಕೇರಳವು (26.9) ನಂತರದ ಸ್ಥಾನದಲ್ಲಿದೆ.
ಓದಿ: 2020ರಲ್ಲಿ ಸೈಬರ್ ಅಪರಾಧದಲ್ಲಿ ಶೇ.11ರಷ್ಟು ಏರಿಕೆ.. ಎನ್‌ಸಿಆರ್‌ಬಿಯಿಂದ ದತ್ತಾಂಶ ಪ್ರಕಟ..