ಮುಂಬೈ (ಮಹಾರಾಷ್ಟ್ರ): ಎನ್ಸಿಪಿ ನಾಯಕ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪಪಟ್ಟಿಯನ್ನು ವಿಶೇಷ ನ್ಯಾಯಾಲಯ ಪರಿಗಣಿಸಿದೆ. ಕುರ್ಲಾ ಗೋವಾಲಾ ಕಾಂಪೌಂಡ್ ಆಸ್ತಿಯನ್ನು ಅತಿಕ್ರಮಣ ಮಾಡಲು ಇತರರೊಂದಿಗೆ ಕ್ರಿಮಿನಲ್ ಪಿತೂರಿಯಲ್ಲಿ ನೇರವಾಗಿ ಮತ್ತು ಉದ್ದೇಶಪೂರ್ವಕವಾಗಿ ಮಲಿಕ್ ಭಾಗಿಯಾಗಿದ್ದಾರೆ ಎಂಬುದಕ್ಕೆ ಪ್ರಾಥಮಿಕ ಸಾಕ್ಷ್ಯವಿದೆ ಎಂದು ಹೇಳಿದೆ. ಅಲ್ಲದೇ, ಮಲಿಕ್ ಮತ್ತು ಈ ಪ್ರಕರಣದ ಮತ್ತೋರ್ವ ಆರೋಪಿಯಾದ 1993ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಸರ್ದಾರ್ ಶಹವಾಲಿ ವಿರುದ್ಧ ತನಿಖೆ ಮುಂದುವರೆಸಲು ನ್ಯಾಯಾಲಯ ಆದೇಶಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ಆರೋಪದ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಸ್ಕರ್ ಹಾಗೂ ಇತರರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ಗಳಡಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಎಫ್‌ಐಆರ್ ದಾಖಲಿಸಿಕೊಂಡಿತ್ತು. ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾದ ದಾವೂದ್ ಇಬ್ರಾಹಿಂ ವಿವಿಧ ಭಯೋತ್ಪಾದಕ, ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ 'ಡಿ ಕಂಪನಿ' ಎಂಬ ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಲವನ್ನು ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕವಸ್ತು, ಭಯೋತ್ಪಾದನೆ, ಭೂಗತ ಚಟುವಟಿಕೆಗಳು, ಅಕ್ರಮ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣ ಸಂಗ್ರಹಿಸಲು ಪ್ರಮುಖ ಆಸ್ತಿಗಳನ್ನ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಎಲ್‌ಇಟಿ, ಜೆಎಂ ಮತ್ತು ಅಲ್-ಖೈದಾ ಸೇರಿ ಅಂತಾರಾಷ್ಟ್ರೀಯ ಉಗ್ರರ ಸಂಘಟನೆಯೊಂದಿಗೆ ಸಕ್ರಿಯವಾಗಿ 'ಡಿ ಕಂಪನಿ' ಕಾರ್ಯನಿರ್ವಹಿಸುತ್ತಿದೆ ಎಂದು ದೂರಲಾಗಿದೆ.
ಈ ಕುರಿತು ದಾಖಲಾದ ಎಫ್‌ಐಆರ್‌ನಲ್ಲಿ ಅನೀಸ್ ಇಬ್ರಾಹಿಂ ಶೇಖ್, ಶಕೀಲ್ ಶೇಖ್, ಜಾವೇದ್ ಪಟೇಲ್ ಮತ್ತು ಇಬ್ರಾಹಿಂ ಮುಷ್ತಾಕ್, ಅಬ್ದುಲ್ ರಜಾಕ್ ಮೆಮನ್ ಎಂಬುವರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಇದರ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು.
ಇದನ್ನೂ ಓದಿ: ನವಾಬ್ ಮಲಿಕ್ ಕುಟುಂಬದ 147 ಎಕರೆ ಕೃಷಿಭೂಮಿ, ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ
ಇದಕ್ಕೂ ಮುನ್ನ ಇದೇ ಪ್ರಕರಣದಲ್ಲಿ ಥಾಣೆಯ ಪೊಲೀಸ್ ಠಾಣೆಯಲ್ಲಿ ಇಕ್ಬಾಲ್ ಕಸ್ಕರ್, ಮುಮ್ತಾಜ್ ಶೇಖ್ ಮತ್ತು ಇಸ್ರಾರ್ ಅಲಿ ಜಮೀಲ್ ಸಯ್ಯದ್ ವಿರುದ್ಧ ಸುಲಿಗೆ ಅಪರಾಧ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ತರುವಾಯ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್, ಸಹೋದರಿ ಮತ್ತು ಈತನ ಸಹಚರರ ವಿರುದ್ಧ ಕೋಕಾ ಕಾಯ್ದೆಯಡಿ ಬಂಧಿಸಲಾಗಿತ್ತು.
ಈ ವೇಳೆ ಕುರ್ಲಾ ಗೋವಾಲಾ ಕಾಂಪೌಂಡ್ ಆಸ್ತಿಯನ್ನು ಅತಿಕ್ರಮಿಸಲು ನವಾಬ್ ಮಲಿಕ್ ಮತ್ತು 'ಡಿ ಕಂಪನಿ'ಯ ಸದಸ್ಯರು ಕ್ರಿಮಿನಲ್ ಸಂಚು ರೂಪಿಸಿ, ಆ ಆಸ್ತಿಯನ್ನು ಅನಧಿಕೃತವಾಗಿ ತಮ್ಮದಾಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ, ಇದರಲ್ಲಿ ಬಾಂಬೆ ಬಾಂಬ್ ಸ್ಫೋಟ ಪ್ರಕರಣದ ದೋಷಿಯಾಗಿರುವ ಸರ್ದಾರ್ ಖಾನ್ ಕೂಡ ಭಾಗಿಯಾಗಿದ್ದ ಎಂದು ಹೇಳಲಾಗಿದೆ.
ಜೊತೆಗೆ ಕಾನೂನು ಬದ್ಧಗೊಳಿಸಲು ಹಸೀನಾ ಪರ್ಕರ್ ಎಂಬುವರಿಗೆ 55 ಲಕ್ಷ ರೂ., ಸಲೀಂ ಪಟೇಲ್‌ಗೆ 1 ಲಕ್ಷ ಮತ್ತು ಸರ್ದಾರ್ ಖಾನ್‌ಗೆ 5 ಲಕ್ಷ ರೂ.ಗಳನ್ನು ನವಾಬ್ ಮಲಿಕ್ ಪಾವತಿಸಿದ್ದರು. ಹೀಗಾಗಿ, ಈ ಪ್ರಕರಣವನ್ನು ಮುಂದುವರಿಸಲು ಸಾಕಷ್ಟು ಆಧಾರಗಳಿವೆ ಎಂಬುವುದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಆದ್ದರಿಂದ ಆರೋಪಿಗಳ ವಿರುದ್ಧ ತನಿಖೆ ಮುಂದುವರೆಸುವ ಅಗತ್ಯವಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ.
ಇದನ್ನೂ ಓದಿ: ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್: ಹಿಂದೂ ಕಾಲೇಜಿನ ಪ್ರಾಧ್ಯಾಪಕ ಅರೆಸ್ಟ್, ವಿದ್ಯಾರ್ಥಿಗಳ ಪ್ರೊಟೆಸ್ಟ್