ನವದೆಹಲಿ: ಶಿವಸೇನೆ ಬಣಗಳ ಸಲ್ಲಿಸಿರುವ ಅರ್ಜಿಗಳಲ್ಲಿ ಸಾಂವಿಧಾನಿಕ ಪ್ರಶ್ನೆಗಳು ಇರುವುದರಿಂದ ಈ ಅರ್ಜಿಗಳ ವಿಚಾರಣೆಯು ವಿಸ್ತೃತ ಪೀಠದಲ್ಲಿ ನಡೆಯುವುದು ಸೂಕ್ತ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 1ಕ್ಕೆ ನಿಗದಿ ಪಡಿಸಲಾಗಿದೆ.
ಶಿವಸೇನೆ ಮತ್ತು ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಗಳಲ್ಲಿ ಪಕ್ಷಾಂತರ, ವಿಲೀನ ಮತ್ತು ಅನರ್ಹತೆಗೆ ಸಂಬಂಧಿಸಿದಂತೆ ಹಲವು ಸಾಂವಿಧಾನಿಕ ಪ್ರಶ್ನೆಗಳು ಇವೆ ಎಂದು ಸುಪ್ರೀಂಕೋರ್ಟ್ ತಿಳಿಸಿವೆ. ಅಲ್ಲದೇ, ವಿಸ್ತೃತ ಪೀಠದಲ್ಲಿ ಈ ವಿಷಯಗಳ ವಿಚಾರಣೆ ಆಗಬೇಕು ಎಂಬುದಕ್ಕೆ ಪೂರಕವಾಗಿ ವಿಷಯಗಳನ್ನು ರೂಪಿಸಿ ಜುಲೈ 27ರೊಳಗೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರಿದ್ದ ಪೀಠವು ನಿರ್ದೇಶನ ನೀಡಿದೆ.
ಉದ್ಧವ್ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯ ಪೀಠ, ಪಕ್ಷಾಂತರ ವಿಷಯಗಳನ್ನು ವಿಸ್ತೃತ ಪೀಠಕ್ಕೆ ರವಾನಿಸುವುದು ಸೂಕ್ತ. ಅದಕ್ಕೆ ಪೂರಕವಾಗಿ ವಿಷಯಗಳನ್ನು ಸಿದ್ಧಪಡಿಸಿ ಮುಂದಿನ ಬುಧವಾರದೊಳಗೆ ಸಲ್ಲಿಸುವಂತೆ ಸೂಚಿಸಿತು. ಉದ್ಧವ್ ಠಾಕ್ರೆ ಬಣದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಶಾಸಕರನ್ನು ಸೆಳೆಯುವ ತಂತ್ರಗಳು ಮುಂದೆ ಯಾವುದೇ ರಾಜ್ಯ ಸರ್ಕಾರಕ್ಕೂ ಅಪಾಯವನ್ನು ತಂದವೊಡ್ಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚಿನ ಮಹಾರಾಷ್ಟ್ರ ರಾಜಕೀಯ ಬೆಳೆವಣಿಗೆಗಳು ಮತ್ತು ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ ಅಘಾಡಿ ಸರ್ಕಾರದ ಪತನಕ್ಕೆ ಸಂಬಂಧಿಸಿ ಉದ್ಧವ್ ಠಾಕ್ರೆ ಬಣ ಮತ್ತು ಬಂಡಾಯ ನಾಯಕ, ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸಿಜೆಐ ನೇತೃತ್ವದ ನ್ಯಾಯಪೀಠ ನಡೆಸುತ್ತಿದೆ.
ಇದನ್ನೂ ಓದಿ: ದ್ರೌಪದಿ ಮುರ್ಮು VS ಯಶವಂತ್ ಸಿನ್ಹಾ: ರಾಷ್ಟ್ರಪತಿ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ