ಥಾಣೆ(ಮಹಾರಾಷ್ಟ್ರ): ದೇಶದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಶುರುವಾದಾಗಿನಿಂದಲೂ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಇನ್ನು ಕೆಲವರು ಡೆಡ್ಲಿ ವೈರಸ್ಗೊಳಗಾಗಿ ಉಳಿತಾಯ ಮಾಡಿದ್ದ ಹಣವನ್ನ ಆಸ್ಪತ್ರೆಗಳಿಗಾಗಿ ಖರ್ಚು ಮಾಡಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ವ್ಯಕ್ತಿಯೋರ್ವ ಕೋವಿಡ್ನಿಂದ ಗುಣಮುಖರಾಗಿ ಬರೋಬ್ಬರಿ 5 ಕೋಟಿ ರೂ. ಲಾಟರಿ ಹಣ ಗೆದ್ದಿದ್ದಾರೆ.
ಮಹಾರಾಷ್ಟ್ರದ ದಿವಾ ನಿವಾಸಿ ರಾಜಕಾಂತ್ ಪಾಟೀಲ್ 5 ಕೋಟಿ ರೂ. ಲಾಟರಿ ಗೆದ್ದಿರುವ ವ್ಯಕ್ತಿ. ಉದ್ಯಮಿಯಾಗಿರುವ ರಾಜಕಾಂತ್ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಿಂದ ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ಈ ವೇಳೆ ಲಾಟರಿ ಕಂಪನಿಯಿಂದ 5 ಕೋಟಿ ರೂ. ಗೆದ್ದಿರುವುದಾಗಿ ಸಂದೇಶವೊಂದು ಬಂದಿದೆ.
ಆಗಷ್ಟೇ ಆಸ್ಪತ್ರೆಯಿಂದ ಮನೆಗೆ ಬಂದಿರುವ ಕಾರಣ ಮೊಬೈಲ್ಗೆ ಬಂದ ಸಂದೇಶದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಕಂಪನಿಯಿಂದ ಕರೆ ಸ್ವೀಕರಿಸಿದ್ದಾರೆ. ಸ್ವಲ್ಪ ಸಮಯದವರೆಗೆ ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮೇಲಿಂದ ಮೇಲೆ ಕರೆ ಬಂದಿದ್ದರಿಂದ ಅಂತಿಮವಾಗಿ ಲಾಟರಿ ಕಂಪನಿಯವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ 5 ಕೋಟಿ ರೂ. ಲಾಟರಿ ಗೆದ್ದಿರುವುದಾಗಿ ಮಾಹಿತಿ ನೀಡಿದ್ದಾರೆ. ಇದನ್ನು ನಂಬದ ರಾಜಕಾಂತ್ ನಕಲಿ ಕರೆ ಇರಬಹುದು, ವಂಚನೆ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಫೋನ್ ಮಾಡ್ತಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಇವರ ಪತ್ನಿ ಹಾಗೂ ಸೋದರ ಮಾವ ಲಾಟರಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಸಂಗ್ರಹ ಮಾಡಿದಾಗ ಸತ್ಯಾಂಶ ಗೊತ್ತಾಗಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸಿಗದ ಬೆಡ್.. ಕೋವಿಡ್ ಸೋಂಕಿತನಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡಿದ ವೈದ್ಯರು
ಕಳೆದ ಕೆಲ ತಿಂಗಳ ಹಿಂದೆ ಇವರು ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಸುಮಾರು 9 ಜನರ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ರಾಜಕಾಂತ್ ಕೂಡ ಒಬ್ಬರಾಗಿದ್ದರು. ಹೀಗಾಗಿ 5 ಕೋಟಿ ರೂ. ಗೆದ್ದಿರುವುದು ನಿಜ ಎಂದು ಗೊತ್ತಾಗಿದೆ.
ಕೊರೊನಾ ರೋಗಿಗಳ ಚಿಕಿತ್ಸೆ ಹಣ ಮೀಸಲು
ತಮಗೆ ಬಂದಿರುವ ಲಾಟರಿ ಹಣದಲ್ಲಿ ಒಂದು ಭಾಗ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲು ನಿರ್ಧರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಅದಕ್ಕಾಗಿ ಸಚಿವ ಏಕನಾಥ್ ಶಿಂಧೆ ಅವರ ಮಾರ್ಗದರ್ಶನ ಪಡೆದುಕೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.