ಮಹಾರಾಷ್ಟ್ರ: ವೈರಸ್ ಹರಡುವುದನ್ನು ತಡೆಗಟ್ಟಲು ಮತ್ತು ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ ಭೀತಿಯನ್ನು ನಿಭಾಯಿಸಲು ಕಠಿಣ ಪ್ರಯತ್ನಗಳನ್ನು ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿದ್ದು, ಲಾಕ್ಡೌನ್ 3.0 ಘೋಷಣೆ ಮಾಡಿದೆ. ಹೆಚ್ಚುವರಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪರಿಹಾರ ಮತ್ತು ಪುನರ್ವಸತಿ ಪ್ರಧಾನ ಕಾರ್ಯದರ್ಶಿ ಅಸೀಮ್ ಗುಪ್ತಾ "ಮೂಲಭೂತವಾಗಿ ನಾವು ಕಾರ್ಯಪಡೆ ಮತ್ತು ಜಿಒಐನ ಸಲಹೆ ಪಡೆದು ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಸೋಂಕಿನ ಭೀತಿ ಕಡಿಮೆಯಾದ ಬಳಿಕ ಈ ಕ್ರಮಗಳನ್ನು ಹಿಂತೆಗೆದುಕೊಳ್ಳುತ್ತೇವೆ." ಎಂದಿದ್ದಾರೆ.
ಆರ್ಟಿಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ಗೊಂದಲ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಕೇವಲ ಆರ್ಟಿಪಿಸಿಆರ್ ಪರೀಕ್ಷೆಗಳನ್ನು ಮಾತ್ರ ಪರಿಗಣಿಸಬೇಕೆಂದು ನಾವು ಆದೇಶಿಸಿದ್ದೇವೆ ಎಂದು ಗುಪ್ತಾ ಹೇಳಿದರು. 3 ನೇ ಹಂತದ ನಿರ್ಬಂಧಗಳು ಮುಂದುವರಿಯಲಿದ್ದು ಇದರಲ್ಲಿ ಅಗತ್ಯ ಅಂಗಡಿಗಳು ಮತ್ತು ಸಂಸ್ಥೆಗಳು ಎಲ್ಲಾ ದಿನಗಳಲ್ಲಿ ಸಂಜೆ 4 ಗಂಟೆಯವರೆಗೆ ತೆರೆದಿರಬಹುದು.
ವಾರದ ದಿನಗಳಲ್ಲಿ ಸಂಜೆ 4 ಗಂಟೆಯವರೆಗೆ ರೆಸ್ಟೋರೆಂಟ್‌ಗಳಿಗೆ 50 ಪ್ರತಿಶತದಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಮತ್ತು ಹೋಂ ಡೆಲಿವರಿಗೆ ಸಹ ಅನುಮತಿ ನೀಡಲಾಗಿದೆ. ಜಿಮ್‌ಗಳು, ಸೆಲೂನ್ ಮತ್ತು ಸ್ಪಾಗಳು ಸಂಜೆ 4 ರವರೆಗೆ ತೆರೆದಿರುತ್ತವೆ. ಇಲ್ಲಿಯೂ ಶೇ 50 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.