ಮುಂಬೈ (ಮಹಾರಾಷ್ಟ್ರ): ಭಾನುವಾರ ನಡೆದ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೆತ್ತಿ ಸುಡುವ ಬಿಸಿಲಿನ ತಾಪಕ್ಕೆ 14 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ, ಬಿಸಿಲಿನ ತಾಪ ಕಡಿಮೆಯಾಗುವವರೆಗೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ರವರೆಗೆ ಹೊರಾಂಗಣ ಕಾರ್ಯಕ್ರಮಗಳನ್ನು ನಿಷೇಧಿಸಿ ಆದೇಶಿಸಿದೆ.
ಮಹಾರಾಷ್ಟ್ರ ಸರ್ಕಾರ ನಾಗರಿಕರ ಸಮಾಜ ಸೇವೆ ಪರಿಗಣಿಸಿ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿಯನ್ನು ನೀಡುತ್ತದೆ. ಅದರಂತೆ ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ್ ಯಾನೆ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಪ್ರಶಸ್ತಿ ಪ್ರದಾನ ಮಾಡಿದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ನಡೆಯುವಾಗಲೇ ಸುಡುವ ಬಿಸಿಲಿನಿಂದಾಗಿ ದುರಂತ ನಡೆದಿತ್ತು.
ನವಿ ಮುಂಬೈನ ಬೃಹತ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟೆಂಟ್ ಹಾಕದ ಕಾರಣ ಸಾವಿರಾರು ಜನ ಬಿಸಿಲಿನಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಬೇಕಾಗಿತ್ತು. ಅದರಲ್ಲೂ, ದತ್ತಾತ್ರೇಯ ನಾರಾಯಣ್ ಅವರ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 11.30ಕ್ಕೆ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಯವರೆಗೂ ನಡೆದಿತ್ತು. ಹಾಗಾಗಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನವು ಜನರನ್ನು ಬಸವಳಿಯುವಂತೆ ಮಾಡಿತ್ತು. ಆಯಾಸ ಹಾಗೂ ನಿರ್ಜಲೀಕರಣದಿಂದ ಜನ ಸಾವಿಗೀಡಾಗಿದ್ದರು ಎಂದು ವರದಿಯಾಗಿತ್ತು.
ಇದನ್ನೂ ಓದಿ: ರಾಜಸ್ಥಾನದಲ್ಲಿ 48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು: ದೆಹಲಿಯನ್ನೂ ಸುಡುತ್ತಿದೆ ಬಿಸಿಲು
5 ಲಕ್ಷ ರೂ.ಪರಿಹಾರ ಘೋಷಣೆ: ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಮಹಾರಾಷ್ಟ್ರ ಸರ್ಕಾರ ತಲಾ 5 ಲಕ್ಷ ರೂಪಾಯಿ ಘೋಷಿಸಿದೆ. ಅಸ್ವಸ್ಥರಾದ ನೂರಾರು ಜನರನ್ನು ನವಿ ಮುಂಬೈನ ಕಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆಗೆ ಸರ್ಕಾರದಿಂದ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
"ಇದು ಅತ್ಯಂತ ಅನಿರೀಕ್ಷಿತ ಮತ್ತು ನೋವಿನ ಸಂಗತಿ. ಮೃತರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬದವರ ದುಃಖದಲ್ಲಿ ಭಾಗಿಯಾಗುತ್ತೇವೆ. ಈ ಘಟನೆಯ ಬಗ್ಗೆ ನನಗೆ ಮಾಹಿತಿ ದೊರೆತ ತಕ್ಷಣ ನಾನು ಕಾಮೋಥೆಯ ಎಂಜಿಎಂ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯುತ್ತಿರುವ ಜನರು ಮತ್ತು ಅಲ್ಲಿನ ವೈದ್ಯರೊಂದಿಗೆ ಮಾತನಾಡಿದೆ. ಆಸ್ಪತ್ರೆಗೆ ದಾಖಲಾದ ಜನರ ಚಿಕಿತ್ಸೆಯ ಬಗ್ಗೆ ನಾನೇ ನಿಗಾ ವಹಿಸಿದ್ದೇನೆ ಮತ್ತು ವೈದ್ಯರಿಗೆ ಸೂಕ್ತ ಸೂಚನೆ ನೀಡಿದ್ದೇನೆ. ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಶೀಘ್ರದಲ್ಲೇ ಸುಧಾರಿಸಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಈ ಬಾರಿ ಬೇಸಿಗೆಯಲ್ಲಿ ಗರಿಷ್ಠ ತಾಪಮಾನ.. ರಾಜ್ಯಕ್ಕೆ ಬರೆ ಎಳೆಯಲಿದೆ ಬಿಸಿಲು