ಮುಂಬೈ: ಇಂದು ಮುಂಜಾನೆ ರಾಯಗಢದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಶಿವ ಸಂಗ್ರಾಮ್ ಪಕ್ಷದ ಮುಖ್ಯಸ್ಥ ಹಾಗು ಮಾಜಿ ಸಚಿವ ವಿನಾಯಕ್ ಮೇಟೆ ಸಾವಿಗೀಡಾಗಿದ್ದಾರೆ. ಮುಂಜಾನೆ 5.30ಕ್ಕೆ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಇವರ ಕಾರು ಅಪಘಾತಕ್ಕೀಡಾಗಿತ್ತು.
ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ. ವಿನಾಯಕ್ ಮೇಟೆ ಅವರ ತಲೆ, ಕುತ್ತಿಗೆ, ಕೈಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿತ್ತು. ಕೂಡಲೇ ಅವರನ್ನು ಎಂಜಿಎಂ (ಮಹಾತ್ಮ ಗಾಂಧಿ ಮಿಷನ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಪನ್ವೇಲ್‌ನ ಎಂಜಿಎಂ ಆಸ್ಪತ್ರೆಗೆ ಆಗಮಿಸಿದ್ದರು. ಮರಾಠಾ ಮೀಸಲಾತಿ ಕುರಿತು ಚರ್ಚೆಗಾಗಿ ಮೇಟೆ ಮುಂಬೈಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಬಟ್ಟೆ ಒಣಹಾಕಿದ್ದ ವೈರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ದಾವಣಗೆರೆಯಲ್ಲಿ ದಂಪತಿ ಸಾವು