ನಾಂದೇಡ್(ಮಹಾರಾಷ್ಟ್ರ): ವರ್ಷದಿಂದ ವರ್ಷಕ್ಕೆ ಹೆಣ್ಣು ಮಕ್ಕಳ ಜನನ ಪ್ರಮಾಣ ದೇಶದಲ್ಲಿ ಕಡಿಮೆಯಾಗ್ತಿದೆ. ಇದೇ ಕಾರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸ್ತಿವೆ. ಆದರೆ, ನಾಂದೇಡ್ ಜಿಲ್ಲೆಯಲ್ಲಿ ಹೆಣ್ಣು ಮಗಳ ಮದುವೆ ಮಾಡಲು ಹಣವಿಲ್ಲ ಎಂಬ ಕಾರಣಕ್ಕಾಗಿ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ನಾಂದೇಡ್ನ ಜಮಖೇಡ್ದಲ್ಲಿ ವಾಸವಾಗಿದ್ದ ರೈತ ಬಾಲಾಜಿಗೆ ಸಿಂಧು ಎಂಬ 18 ವರ್ಷದ ಮಗಳಿದ್ದಳು. ಆಕೆಯ ಮದುವೆ ಮಾಡುವ ಉದ್ದೇಶದಿಂದ ಪೋಷಕರು ಕೆಲ ದಿನಗಳಿಂದ ಹಣ ಹೊಂದಾಣಿಕೆಯ ಕೆಲಸ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಪ್ರತಿದಿನ ದಂಪತಿ ನಡುವೆ ಜಗಳವಾಗ್ತಿತ್ತು. ನಿನ್ನೆ ಕೂಡಾ ಜಗಳವಾಗಿದೆ. ಈ ವೇಳೆ ಬಾಲಾಜಿ ಕಟ್ಟಿಕೊಂಡ ಹೆಂಡತಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ಬಾರಮುಲ್ಲಾ: ಪ್ರಮುಖ ಎಲ್ಇಟಿ ಉಗ್ರನ ಹೊಡೆದುರುಳಿಸಿದ ಭಾರತೀಯ ಸೇನೆ
ಘಟನೆಯ ಬೆನ್ನಲ್ಲೇ ಪಾಪಿ ತಂದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಾಯಾಳು ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಾವನ್ನಪ್ಪಿರುವ ಸಿಂಧುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.