ಭಿಲಾಯಿ(ಛತ್ತೀಸ್ಗಢ): ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಪ್ರಕರಣದ ಮಾಸ್ಟರ್‌ಮೈಂಡ್ ಎಂದೇ ಬಿಂಬಿತವಾಗಿರುವ ದೀಪಕ್ ನೇಪಾಳಿಯನ್ನು ಛತ್ತೀಸ್ಗಡದಲ್ಲಿ ಇಂದು ಬಂಧಿಸಿದ್ದಾರೆ. ಆರೋಪಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಅಪಹರಣ, ದರೋಡೆ, ರಾಷ್ಟ್ರೀಯ ಭದ್ರತಾ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ.
ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬರುತ್ತಿದ್ದಂತೆ ದೀಪಕ್ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ರಾಜ್ಯದ ಸುಪೇಲಾ, ವೈಶಾಲಿನಗರ, ಕಂಟೋನ್ಮೆಂಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪತ್ತೆಗಾಗಿ ಬಲೆ ಬೀಸಿದ್ದರು. ಇದೀಗ ಕ್ರೈಂ ಬ್ರಾಂಚ್ ಅಧಿಕಾರಿಗಳು ಮತ್ತು ವೈಶಾಲಿ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಭಿಲಾಯಿಯಲ್ಲಿ ಬಂಧಿಸಿದ್ದಾರೆ.
ಛತ್ತೀಸ್ಗಢ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪೊಲೀಸರು ದೀಪಕ್ಗಾಗಿ ಸಾಕಷ್ಟು ಶೋಧ ನಡೆಸಿದ್ದರು. ಬಳಿಕ ಜುಲೈ ತಿಂಗಳಲ್ಲಿ ದೀಪಕ್ ನೇಪಾಳಿ ಸಹೋದರ ನೀರಜ್ ನೇಪಾಳಿ ಮತ್ತು ಆತನ ನಾಲ್ವರು ಸಹಚರರನ್ನು ಸೆರೆ ಹಿಡಿದಿದ್ದರು.
ಪ್ರಕರಣದಲ್ಲಿ ಮತ್ತೊಂದೆಡೆ, ಮಹಾದೇವ್ ಬೆಟ್ಟಿಂಗ್ ಆ್ಯಪ್ನ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾದ ದುಬೈನಲ್ಲಿ ನೆಲೆಸಿರುವ ಸೌರಭ್ ಚಂದ್ರಕರ್ ಅವರ ವ್ಯವಹಾರದ ಮೇಲೆ ಇಡಿ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಇವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರಿಗೆ ಸೇರಿದ 100 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಸೌರಭ್ ಚಂದ್ರಕರ್ ಛತ್ತೀಸ್ಗಢದ ಭಿಲಾಯಿ ನಿವಾಸಿ. ಚಂದ್ರಕರ್ ಮತ್ತು ರವಿ ಉಪ್ಪಲ್ ಒಗ್ಗೂಡಿ ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಪ್ರಾರಂಭಿಸಿದ್ದರು. ಬಳಿಕ ದೇಶಾದ್ಯಂತ ಈ ಬೆಟ್ಟಿಂಗ್ ಆ್ಯಪ್ ಬಳಕೆ ಹೆಚ್ಚಾದಾಗ ಕಪ್ಪು ಹಣದ ಹರಿವು ತೀವ್ರವಾಗಿದೆ. ಆ್ಯಪ್ ಬಳಕೆ ಹೆಚ್ಚಿದ ನಂತರ ಈ ಇಬ್ಬರೂ ದುಬೈಗೆ ಹಾರಿದ್ದರು. ಆ ನಂತರ ಅಲ್ಲಿಂದ ತಮ್ಮ ವ್ಯವಹಾರಗಳನ್ನು ನಿಯಂತ್ರಿಸಲು ಆರಂಭಿಸಿದರು. ಕಳೆದ ಡಿಸೆಂಬರ್ 12ರಂದು ಮಹಾದೇವ್ ಆ್ಯಪ್ನ ಸಹಸಂಸ್ಥಾಪಕ ರವಿ ಉಪ್ಪಲ್ ಅವರನ್ನು ದುಬೈ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿರುದ್ಧ ವೈಶಾಲಿನಗರ ಪೊಲೀಸ್ ಠಾಣೆಯಲ್ಲಿ 13, ಜಮೂಲ್ ಮತ್ತು ಭಿಲಾಯಿ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಪ್ರಕರಣ: ಶ್ರದ್ಧಾ ಕಪೂರ್ಗೆ ಇಡಿ ಸಮನ್ಸ್, ಇಂದು ವಿಚಾರಣೆ