ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಸರ್ಕಾರದ ನೂತನ ಸಚಿವರಿಗೆ ಖಾತೆಗಳನ್ನು ಶುಕ್ರವಾರ ಹಂಚಿಕೆ ಮಾಡಲಾಗಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನಾ ಖಾತೆಯನ್ನು ನೀಡಲಾಗಿದೆ. ಇದೇ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಒಬ್ಬ ಶಾಸಕಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ.
ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಜುಲೈ 2ರಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ನಾಯಕ ಅಜಿತ್ ಪವಾರ್ ಶಿವಸೇನೆ (ಏಕನಾಥ ಶಿಂಧೆ ಬಣ) ಹಾಗೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ತಮ್ಮ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಎಂಟು ಜನ ಬೆಂಬಲಿಗ ಶಾಸಕರೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದು ಹಿರಿಯ ರಾಜಕಾರಣಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷದ ವಿಭಜನೆಗೂ ಕಾರಣವಾಗಿದೆ.
ಇದೀಗ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಎನ್‌ಸಿಪಿ ನಾಯಕರು ಸೇರಿದ ಸುಮಾರು ಎರಡು ವಾರಗಳ ನಂತರ ಡಿಸಿಎಂ ಅಜಿತ್ ಪವಾರ್ ಸೇರಿ ಎಲ್ಲ ಒಂಭತ್ತು ಜನರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಚೇರಿ ಪ್ರಕಟಣೆಯನ್ನೂ ಹೊರಡಿಸಿದೆ. ಹಾಲಿ ಸಚಿವರ ಖಾತೆಗಳಲ್ಲೂ ಕೆಲವು ಬದಲಾವಣೆ ಮಾಡಲಾಗಿದ್ದು, ಹೊಸ ಸಂಪುಟಕ್ಕೆ ರಾಜ್ಯಪಾಲ ರಮೇಶ್ ಬೈಸ್ ಅವರಿಂದ ಅನುಮೋದನೆ ಪಡೆಯಲಾಗಿದೆ.
ಯಾರಿಗೆ ಯಾವ ಖಾತೆ?: ಡಿಸಿಎಂ ಅಜಿತ್ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನಾ ಖಾತೆಯನ್ನು ನೀಡಲಾಗಿದೆ. ಉಳಿದ ಸಚಿವರಾದ ಧನಂಜಯ್ ಮುಂಡೆ ಅವರಿಗೆ ಕೃಷಿ, ದಿಲೀಪ್ ವಾಲ್ಸೆ ಪಾಟೀಲ್ ಅವರಿಗೆ ಸಹಕಾರ ಖಾತೆ, ಹಸನ್ ಮುಶ್ರಿಫ್ ಅವರಿಗೆ ವೈದ್ಯಕೀಯ ಶಿಕ್ಷಣ, ಛಗನ್ ಭುಜಬಲ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಧರ್ಮರಾವ್ ಅತ್ರಮ್ ಅವರಿಗೆ ಆಹಾರ ಮತ್ತು ಔಷಧ ಆಡಳಿತ, ಸಂಜಯ್ ಬನ್ಸೋಡೆ ಅವರಿಗೆ ಕ್ರೀಡೆ, ಅದಿತಿ ತಾತ್ಕರೆ ಅವರಿಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅನಿಲ್ ಪಾಟೀಲ್ ಅವರಿಗೆ ಪರಿಹಾರ, ಪುನರ್ವಸತಿ ಮತ್ತು ವಿಪತ್ತು ನಿರ್ವಹಣೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ.
ಒಂಬತ್ತು ಎನ್‌ಸಿಪಿ ಸಚಿವರ ಸೇರ್ಪಡೆಯೊಂದಿಗೆ ಈಗ ಮಹಾರಾಷ್ಟ್ರ ಮಂತ್ರಿ ಮಂಡಲದಲ್ಲಿ ಒಟ್ಟು ಕ್ಯಾಬಿನೆಟ್ ಸಚಿವ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಶಿಂಧೆ ನೇತೃತ್ವದ ಶಿವಸೇನೆ ಶಾಸಕರು ಅಜಿತ್ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನೆ ಹಂಚಿಕೆ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಯಾಗಿದೆ. ಮತ್ತೊಂದೆಡೆ, ಅದಿತಿ ತಾತ್ಕರೆ ಅವರ ಸೇರ್ಪಡೆಯೊಂದಿಗೆ ಮೊದಲ ಬಾರಿಗೆ ಏಕನಾಥ್ ಶಿಂಧೆ ಸರ್ಕಾರದಲ್ಲಿ ಮಹಿಳಾ ಶಾಸಕಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ. ಈ ಹಿಂದೆ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಅದಿತಿ ಹಲವಾರು ಖಾತೆಗಳೊಂದಿಗೆ ರಾಜ್ಯ ಸಚಿವರಾಗಿದ್ದರು.
ಇದನ್ನೂ ಓದಿ: ಬಂಡಾಯ ಶಾಸಕರ ಅನರ್ಹತೆಯ ಪ್ರಕ್ರಿಯೆ ತ್ವರಿತಗೊಳಿಸಿ: ಮಹಾರಾಷ್ಟ್ರ ಸ್ಪೀಕರ್‌ಗೆ ಸುಪ್ರೀಂಕೋರ್ಟ್ ನೋಟಿಸ್