ಸೂರತ್(ಗುಜರಾತ್): ಶಿವಸೇನೆಯ ಸುಮಾರು 40 ಬಂಡಾಯ ಶಾಸಕರು ಮತ್ತು ಅವರ ನಾಯಕ ಏಕನಾಥ್ ಶಿಂಧೆ ಅವರು ಇಲ್ಲಿರುವ ತಮ್ಮ ಹೋಟೆಲ್ ಅನ್ನು ತೊರೆದಿದ್ದಾರೆ ಮತ್ತು ಈಗ ಅವರನ್ನು ಅಸ್ಸೋಂನ ಗುವಾಹಟಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಬಂಡಾಯ ಸಚಿವ ಏಕನಾಥ್ ಶಿಂಧೆ ಮತ್ತು ಸುಮಾರು 40 ಬಂಡಾಯ ಶಿವಸೇನೆ ಶಾಸಕರು ಸೋಮವಾರ ರಾತ್ರಿ ಗುಜರಾತ್‌ನ ಸೂರತ್ ನಗರದ ಡುಮಾಸ್ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದರು. ಈಗ, ಕೆಲವು ಕಾರಣಗಳಿಂದ ಅವರನ್ನು ವಿಮಾನದ ಮೂಲಕ ಅಸ್ಸೋಂನ ಗುವಾಹಟಿಗೆ ಸ್ಥಳಾಂತರಿಸಲಾಗುತ್ತಿದೆ. ಈ ಶಾಸಕರನ್ನು ಐಷಾರಾಮಿ ಬಸ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದು, ಅಲ್ಲಿಂದ ವಿಮಾನದ ಮೂಲಕ ಬಿಜೆಪಿ ಆಡಳಿತದ ಅಸ್ಸೋಂಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾತುಕತೆ ವಿಫಲ: ಮಂಗಳವಾರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳುಹಿಸಿದ ಶಿವಸೇನಾ ಮುಖಂಡರಾದ ಮಿಲಿಂದ್ ನಾರ್ವೇಕರ್ ಮತ್ತು ರವೀಂದ್ರ ಫಾಟಕ್ ಅವರು ಹೋಟೆಲ್‌ನಲ್ಲಿ ಬಂಡಾಯ ಶಾಸಕರರೊಂದಿಗೆ ಚರ್ಚೆ ನಡೆಸಿದರು. ಆದರೆ, ಮಾತುಕತೆ ಯಶಸ್ವಿಯಾಗಲಿಲ್ಲ ಎನ್ನಲಾಗ್ತಿದೆ.
ಗುವಾಹಟಿಗೆ ಸ್ಥಳಾಂತರ: ಶಿವಸೇನಾ ಪಕ್ಷದ ಕಾರ್ಯಕರ್ತರಿಂದ ಯಾವುದೇ ಘರ್ಷಣೆಯನ್ನು ತಪ್ಪಿಸಲು ಶಿವಸೇನೆ ಶಾಸಕರನ್ನು ವಿಮಾನದಲ್ಲಿ ಗುವಾಹಟಿಗೆ ಕರೆತರಲಾಗಿದೆ. ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಸೂರತ್ ಮೂಲದ ಸ್ಟಾರ್ ಹೋಟೆಲ್‌ನಲ್ಲಿ ಸೇನಾ ಶಾಸಕರು ಬೀಡು ಬಿಟ್ಟಿದ್ದರು. ಶಿಂಧೆ ಅವರೊಂದಿಗೆ 40 ಶಾಸಕರಿದ್ದಾರೆ. ಭದ್ರತಾ ಕಾರಣಕ್ಕಾಗಿ ನಾವು ಶಾಸಕರನ್ನು ಗುವಾಹಟಿಗೆ ಸ್ಥಳಾಂತರಿಸಿದ್ದೇವೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿರುವ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿಕೂಟ ಹಿನ್ನೆಡೆ ಅನುಭವಿಸಿದ ಒಂದು ದಿನದ ನಂತರ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ.
ಸ್ಪರ್ಧಿಸಿದ್ದ ಐದು ವಿಧಾನ ಪರಿಷತ್ ಸ್ಥಾನದಲ್ಲಿ ಬಿಜೆಪಿ ವಿಜಯ ಸಾಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿಯೊಬ್ಬರಿಗೆ ಸೋಲಾಗಿದೆ. ಚುನಾವಣೆಯಲ್ಲಿ ಆಡಳಿತಾರೂಢ ಶಾಸಕರು ಅಡ್ಡ ಮತದಾನ ಮಾಡಿದ್ದಾರೆಂದು ಗೊತ್ತಾಗ್ತಿದ್ದಂತೆ ಮತ್ತೊಂದು ಒಡಕು ಶುರುವಾಗಿದೆ. ಪರಿಷತ್ತಿನ ಚುನಾವಣಾ ಫಲಿತಾಂಶದ ನಂತರ, ಶಿಂಧೆ ಅಜ್ಞಾತವಾಸಕ್ಕೆ ತೆರಳಿದ್ದಾರೆ. ಅವರು ಪಕ್ಷದ ಕೆಲವು ಶಾಸಕರೊಂದಿಗೆ ಹೋಟೆಲ್‌ನಲ್ಲಿ ಮೊಕ್ಕಾಂ ಹೂಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕ್ಷಿಪ್ರ ಕ್ರಾಂತಿಯೇ?..11 ಶಾಸಕರ ಜೊತೆ ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ನಾಪತ್ತೆ