ಮುಂಬೈ, ಮಹಾರಾಷ್ಟ್ರ: 39 ದಿನಗಳ ಬಳಿಕ ಇಂದು ಬೆಳಗ್ಗೆ 11 ಗಂಟೆಗೆ ಶಿಂಧೆ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದೆ. ಆದರೆ, ಈ ವಿಸ್ತರಣೆಗೂ ಮುನ್ನ ಶಿಂಧೆ ಗುಂಪಿನ ಎಲ್ಲ ಶಾಸಕರ ಮಹತ್ವದ ಸಭೆಯು ಸಹ್ಯಾದ್ರಿ ಅತಿಥಿಗೃಹದಲ್ಲಿ ಬೆಳಗ್ಗೆ ನಡೆಯಲಿದೆ. ಈ ಸಭೆಯಲ್ಲಿ ಸಚಿವ ಸ್ಥಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶಾಸಕರಿಗೆ ಸಚಿವ ಸ್ಥಾನ ಸಿಗದ ಕಾರಣ ಅವರನ್ನು ಮನವೊಲಿಸುವ ಪ್ರಯತ್ನ ಮಾಡಲಾಗುವುದು.
ಜೂನ್ 30 ರಂದು ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ವಾನಿಸ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 39 ದಿನಗಳು ಕಳೆದರೂ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಿರಲಿಲ್ಲ. ಸಂಪುಟ ವಿಸ್ತರಣೆಗಾಗಿ ಇಬ್ಬರೂ ಆಗಾಗ ದೆಹಲಿಗೆ ಭೇಟಿ ನೀಡುತ್ತಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಇದಕ್ಕೆ ಗ್ರೀನ್ ಸಿಗ್ನಲ್ ನೀಡರಲಿಲ್ಲ.
ರಾಜ್ಯದಲ್ಲಿನ ಅಧಿಕಾರದ ಹೋರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಿಂದಾಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅನಿಶ್ಚಿತತೆಯ ಚರ್ಚೆ ನಡೆದಿದೆ. ಆದ್ದರಿಂದ, ವಿರೋಧ ಪಕ್ಷಗಳಾದ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಶಿಂಧೆ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದವು. ಇದೀಗ ಈ ಹಿನ್ನೆಲೆ ಕೊನೆಗೂ ನಿನ್ನೆ ದೆಹಲಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇಂದು ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ. ಆದರೆ, ಈ ವಿಸ್ತರಣೆಗೂ ಮುನ್ನ ಶಿಂಧೆ ಗುಂಪಿನ ಶಾಸಕರ ಮಹತ್ವದ ಸಭೆ ನಡೆಯುತ್ತಿದೆ.
ಈ ಸಂಪುಟ ವಿಸ್ತರಣೆ ಸಂಪೂರ್ಣ ಸ್ವರೂಪದ್ದಲ್ಲ. ಆದರೆ, ಇಂದು ವಿಸ್ತರಣೆಯಲ್ಲಿ ಕೆಲವು ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎರಡೂ ಕಡೆಯ ಒಟ್ಟು 15 ರಿಂದ 20 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಶಿಂಧೆ ಗುಂಪಿನಿಂದ ದಾದಾ ಭೂಸೆ, ಗುಲಾಬ್ರಾವ್ ಪಾಟೀಲ್, ಉದಯ್ ಸಾಮಂತ್, ಸಂದೀಪನ್ ಬುಮ್ರೆ, ಸಂಜಯ್ ರಾಥೋಡ್, ಶಂಭುರಾಜೇ ದೇಸಾಯಿ, ದೀಪಕ್ ಕೇಸರ್ಕರ್, ತಾನಾಜಿ ಸಾವಂತ್, ಸಂಜಯ್ ಶಿರ್ಸಾತ್ ಅವರ ಹೆಸರುಗಳು ಚರ್ಚೆಗೆ ಬಂದಿವೆ.
ಆದರೆ ಶಿಂಧೆ ಗುಂಪಿನ 40 ಶಾಸಕರ ಪೈಕಿ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಈ ಸಭೆಯಲ್ಲಿ ಸಚಿವ ಸ್ಥಾನ ಸಿಗದ ಶಾಸಕರನ್ನು ಮನವೊಲಿಸುವ ಪ್ರಯತ್ನ ನಡೆಯಲಿದ್ದು, ಎರಡನೇ ಹಂತದಲ್ಲಿ ಅವರಿಗೆ ಅವಕಾಶ ಸಿಗಲಿದೆ ಎಂದು ಭರವಸೆ ನೀಡಲಿದ್ದಾರೆ.
ಇಡೀ ರಾಜ್ಯದ ಗಮನ ಸಚಿವ ಸಂಪುಟ ವಿಸ್ತರಣೆಯತ್ತ ನೆಟ್ಟಿದ್ದರೆ, ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆ ಬಳಿಕ ಪಕ್ಷದೊಳಗಿನ ಬಂಡಾಯ ತಡೆಯಲು ಏಕನಾಥ್ ಶಿಂಧೆ ಶತಪ್ರಯತ್ನ ನಡೆಸಲಿದ್ದಾರೆ. ಅತೃಪ್ತ ಶಾಸಕರಿಗೆ ವಿವರಣೆ ನೀಡಲು ಶಿವಸೇನೆ ನಾಯಕ ವಿನಾಯಕ್ ರಾವುತ್ ಮಹತ್ವದ ಪಾತ್ರ ವಹಿಸಿದ್ದು, ಮತ್ತೊಂದೆಡೆ 12 ಬಂಡಾಯ ಶಾಸಕರು ನಮ್ಮೊಂದಿಗಿದ್ದಾರೆ ಎಂದು ಶಿವಸೇನೆ ನಾಯಕ ವಿನಾಯಕ್ ರಾವುತ್ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ನೂತನ ಸಿಎಂ ಶಿಂಧೆಗೆ ತಲೆ ನೋವು ಹೆಚ್ಚಾಗಿದೆ.
ಓದಿ: ಶಿವಸೇನೆಯ ಹಿರಿಯ ನಾಯಕರ ಭೇಟಿ: ಶಿಂದೆ ಮತ್ತೊಂದು ರಾಜಕೀಯ ತಂತ್ರವೇನು?