ಚೆನ್ನೈ: ಸಲಿಂಗ ಸಂಬಂಧ ವಿರೋಧಿಸಿದ ಪೋಷಕರಿಗೆ ಕೌನ್ಸೆಲಿಂಗ್ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ತಮಗೆ ರಕ್ಷಣೆ ಕೋರಿ ಸಲಿಂಗ ಸಂಬಂಧ ಹೊಂದಿರುವ ಇಬ್ಬರು ಯುವತಿಯರು ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ನಡೆಸಿದರು. ಈ ವಿಚಾರದ ಬಗ್ಗೆ ನನ್ನ ಈ ಹಿಂದಿನ ಕಲ್ಪನೆಯನ್ನೇ ಮುರಿಯುತ್ತಿದ್ದೇನೆ. ಯುವತಿಯರು ಹಾಗೂ ಅವರ ಹೆತ್ತವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗುವುದು. ಅದರ ಬಳಿಕವೇ ಪ್ರಕರಣದ ಬಗ್ಗೆ ತೀರ್ಪು ನೀಡಲಾಗುವುದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅರ್ಜಿದಾರರು ಮತ್ತು ಅವರ ಪೋಷಕರ ಮಾನಸಿಕ ಸ್ಥಿತಿ ಮತ್ತು ಅವರ ನಿಲುವು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಪೀಠವು ವಿಚಾರಣೆ ನಡೆಸಿತು.
ಪ್ರಕರಣದಲ್ಲಿ ಮೊದಲನೇ ಅರ್ಜಿದಾರ ಯುವತಿ (ಸುಮಾರು 22 ವರ್ಷ ವಯಸ್ಸಿನವರು) ಬಿ.ಎಸ್ಸಿ ಮುಗಿಸಿ, ಪ್ರಸ್ತುತ ಎಂಬಿಎ ವ್ಯಾಸಂಗ ಮಾಡುತ್ತಿದ್ದರೆ ಮತ್ತು 2 ನೇ ಅರ್ಜಿದಾರ ಯುವತಿಯು ಸುಮಾರು 20 ವರ್ಷ ವಯಸ್ಸಿನವರಾಗಿದ್ದಾರೆ.
ಅರ್ಜಿದಾರರು ಕಳೆದ 2 ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯವಿದ್ದು, ಇಬ್ಬರ ನಡುವಿನ ಸ್ನೇಹವು ಕ್ರಮೇಣ ಪ್ರೀತಿಗೆ ತಿರುಗಿದೆ. ಇಬ್ಬರೂ ಒಟ್ಟಿಗೆ ಜೀವನ ನಡೆಸುವುದಾಗಿ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ.