ಚೆನ್ನೈ: ತಮಿಳುನಾಡಿನಲ್ಲಿ ವನ್ನಿಯರ್ ಸಮುದಾಯಕ್ಕೆ ಶೇ.10.5ರಷ್ಟು ಮೀಸಲಾತಿ ನೀಡುವ ಅಲ್ಲಿನ ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದು ಮಾಡಿದೆ.
ಮೀಸಲಾತಿ ವಿರುದ್ಧದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ದುರೈಸ್ವಾಮಿ ಹಾಗೂ ನ್ಯಾ.ಮುರಳಿ ಶಂಕರ್ ಅವರಿದ್ದ ದ್ವಿಸದಸ್ಯ ಪೀಠ, ಜಾತಿ ಜನಸಂಖ್ಯೆಗೆ ಸಂಬಂಧಿಸಿದಂತೆ ಪ್ರಮಾಣೀಕರಿಸಲಾಗದ ಅಂಕಿ-ಅಂಶಗಳು ಇಲ್ಲದೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಉಲ್ಲೇಖಿಸಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತು.
ತಮಿಳುನಾಡು ಶೇ. 69ರಷ್ಟು ಮೀಸಲಾತಿ ನೀತಿಯನ್ನು ಅನುಸರಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದರಲ್ಲಿ ಒಂದು ಸಮುದಾಯಕ್ಕೆ ಆಂತರಿಕ ಮೀಸಲಾತಿ ಒದಗಿಸುವ ತಮಿಳುನಾಡು ಸರ್ಕಾರದ ಪ್ರತಿಪಾದನೆಯು ಪ್ರಶ್ನೆಗೆ ಒಳಪಟ್ಟಿರುತ್ತದೆ. ಹೀಗಾಗಿ, ಪೀಠವು ಸರ್ಕಾರಿ ಮೀಸಲಾತಿಯನ್ನು ಕಾನೂನುಬಾಹಿರ ಎಂದು ರದ್ದುಗೊಳಿಸಿತು.
ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿಗೆ ನಿರ್ಧಾರ
ಏತನ್ಮಧ್ಯೆ, ತಮಿಳುನಾಡು ಸರ್ಕಾರದ ಅಡ್ವೊಕೇಟ್ ಜನರಲ್ ಷಣ್ಮುಗ ಸುಂದರಂ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರವು ಸುಪ್ರೀಂಕೋರ್ಟ್‌ಗೆ ಹೋಗಲಿದೆ ಎಂದು ಹೇಳಿದ್ದಾರೆ. ಒಳಮೀಸಲಾತಿ ನೀಡುವ ಹಕ್ಕು ರಾಜ್ಯ ಸರ್ಕಾರಕ್ಕಿದೆ ಎಂದ ಅವರು, ಸುಪ್ರೀಂಕೋರ್ಟ್‌ನಲ್ಲಿ ಸರ್ಕಾರದ ಆದೇಶ ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಹಿಂದಿನ ಎಐಎಡಿಎಂಕೆ ಸರ್ಕಾರವು ವನ್ನಿಯಾರ್ ಸಮುದಾಯಕ್ಕೆ ಶೇ.10.5ರಷ್ಟು ಒಳ ಮೀಸಲಾತಿಯನ್ನು ಒದಗಿಸಲು ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿತ್ತು. ಇದು ಮಿತ್ರ ಪಕ್ಷವಾದ ಪಿಎಂಕೆಯ ದೀರ್ಘಾವಧಿಯ ಮನವಿಯಾಗಿತ್ತು. ಬಳಿಕ ನಡೆದ ಚುನಾವಣೆ ಎಐಎಡಿಎಂಕೆ ಅಧಿಕಾರ ಕಳೆದುಕೊಂಡಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಅಧಿಕಾರಕ್ಕೆ ಬಂದು ಈ ಒಳ ಮೀಸಲಾತಿ ಮಸೂದೆಗೆ ಒಪ್ಪಿಗೆ ನೀಡಿತ್ತು. ವನ್ನಿಯಾರ್ ಸಮುದಾಯಕ್ಕೆ 10.5ರಷ್ಟು ಒಳ ಮೀಸಲಾತಿ ಕಾನೂನಾತ್ಮಕವಾಗಿ ಜಾರಿಗೆ ಆದೇಶವನ್ನು ಹೊರಡಿಸಿತ್ತು. ಇದೀಗ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.