ಮಧುರೈ: ಮಹಿಳೆಯೊಬ್ಬಳು ತನ್ನ ತೃತೀಯ ಲಿಂಗಿ (ಟ್ರಾನ್ಸ್‌ಮ್ಯಾನ್) ಸಹಚರನೊಂದಿಗೆ ವಾಸಿಸಲು ಅನುಮತಿ ನೀಡಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಶುಕ್ರವಾರ ತೀರ್ಪು ನೀಡಿದೆ. ಮದುವೆ ಮಾಡಿಕೊಂಡಿರುವ ಮಹಿಳೆ ಮತ್ತು ತೃತೀಯಲಿಂಗಿ ನಡುವಿನ ಸಂಬಂಧವನ್ನು ಅವರ ಕುಟುಂಬಗಳು ವಿರೋಧಿಸಿ ಜೋಡಿಯನ್ನು ಬೇರ್ಪಡಿಸಿದ್ದು, ಪರಿಹಾರ ಕೋರಿ ವಿರ್ಧುನಗರದ ತೃತೀಯಲಿಂಗಿ ಮಧುರೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ತೃತೀಯ ಲಿಂಗಿ ಸಲ್ಲಿಸಿರುವ ಅರ್ಜಿಯಲ್ಲಿ, "ನಾನು ದಿಂಡುಗಲ್ ಜಿಲ್ಲೆಯ ಹುಡುಗಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದೇನೆ. ನಾವು ಜುಲೈ 7 ರಂದು ಮದುವೆಯಾಗಿದ್ದೇವೆ. ಆದರೆ, ಮಹಿಳೆಯ ಮನೆಯವರು ಜುಲೈ 16ರಂದು ನಮ್ಮ ಮದುವೆಯನ್ನು ಆಕ್ಷೇಪಿಸಿದ್ದಾರೆ. ನಾವು ವಾಸಿಸುತ್ತಿದ್ದ ಮನೆಗೆ ನುಗ್ಗಿ ನಮ್ಮಿಬ್ಬರ ಮೇಲೆ ಹಲ್ಲೆ ನಡೆಸಿ ಹೆಂಡತಿಯನ್ನು ಅಪಹರಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
"ಆಕೆಯ ಮನಸ್ಸನ್ನು ಬದಲಾಯಿಸಲು, ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದಂತಹ ಶಾಕ್ ಟ್ರೀಟ್ಮೆಂಟ್ ನೀಡಿದ್ದಾರೆ. ಈ ರೀತಿಯ ಸಂಬಂಧವನ್ನು ಒಪ್ಪಿಕೊಳ್ಳಲು ಕುಟುಂಬ ಸಿದ್ಧವಿಲ್ಲ. ನನ್ನನ್ನು ಬಿಟ್ಟು ಹೋಗುವಂತೆ ಹೇಳಿ ಆಕೆಯ ಸಹೋದರ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ, ಜೊತೆಗೆ ನನಗೂ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ಪಿ.ಎನ್. ಪ್ರಕಾಶ್ ಮತ್ತು ಆರ್.ಹೇಮಲತಾ ಅವರು ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿ, ಅರ್ಜಿದಾರರ ಗೆಳತಿಗೆ 21 ವರ್ಷವಾಗಿದ್ದು, ಅವರು ತಮ್ಮ ಸಹಚರರೊಂದಿಗೆ ಹೋಗಲು ಸಿದ್ಧರಿದ್ದಾರೆ. ಆದ್ದರಿಂದ ಅವರ ಇಚ್ಛೆಯಂತೆ ಹೋಗಲು ಅವಕಾಶ ನೀಡಬೇಕು" ಎಂದು ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ: ಮಾಜಿ ಆರ್ಟಿಒ ಅಧಿಕಾರಿ, ಪತ್ನಿಗೆ 3 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿದ ಕೋರ್ಟ್