ವಿದಿಶಾ (ಮಧ್ಯಪ್ರದೇಶ): ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.
ಪಠಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಹರ್ವಾಸಾ ಗ್ರಾಮದ ಬಳಿ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದಾಗ ಎರಡೂ ವಾಹನಗಳಲ್ಲಿ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದರು. ಅಪಘಾತದ ನಂತರ ಒಂದು ಮೋಟಾರ್ ಸೈಕಲ್‌ನ ಇಬ್ಬರು ಸವಾರರು ಮತ್ತು ಮತ್ತೊಂದು ವಾಹನದ ಸವಾರ ಸಾವನ್ನಪ್ಪಿದ್ದಾರೆ. ಉಳಿದ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಠಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಬಬಿತಾ ಸಿಂಗ್ ಹೇಳಿದ್ದಾರೆ.
ಇತ್ತೀಚಿನ ಅಪಘಾತ ಪ್ರಕರಣಗಳು-
ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಮತ್ತೊಂದೆಡೆ, ನಿನ್ನೆ ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ ನಡೆದಿತ್ತು. ಮಹಾರಾಷ್ಟ್ರದಲ್ಲಿ ಸೈಲಾನಿ ಬಾಬಾನ ದರ್ಶನಕ್ಕೆ ತೆರಳುತ್ತಿದ್ದ ಕನಿಷ್ಠ 12 ಜನರು ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಎಕ್ಸ್ ಪ್ರೆಸ್ ವೇ ಸಮೀಪದ ವೈಜಾಪುರ ಸಮೀಪದ ಜಂಬಾರ್ ಗ್ರಾಮದ ಬಳಿ ಇರುವ ಟೋಲ್ ಬೂತ್ನಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿತ್ತು. ವೇಗವಾಗಿ ಬಂದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ, ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದಾದ ಬಳಿಕ ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದರು. ಮೃತರ ಕುಟುಂಬದ ಸದಸ್ಯರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿಸಿದ್ದಾರೆ.
ಬಸ್- ಟಾಟಾ ಸುಮೋ ನಡುವೆ ಡಿಕ್ಕಿ, ಐವರು ಸ್ಥಳದಲ್ಲೇ ಸಾವು: ಸಾರಿಗೆ ಸಂಸ್ಥೆಯ ಬಸ್ ಮತ್ತು ಟಾಟಾ ಸುಮೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಹೊರವಲಯದಲ್ಲಿ ಸೋಮವಾರ ಸಂಭವಿಸಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಲಬುರಗಿಯಿಂದ ಗಜೇಂದ್ರಗಡ ಮಾರ್ಗವಾಗಿ ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ಟಾಟಾ ಸುಮೋ ತರಳುತ್ತಿತ್ತು. ಇನ್ನು ಗದಗದಿಂದ ಗಜೇಂದ್ರಗಡಕ್ಕೆ ಬಸ್ ಸಾಗುತ್ತಿತ್ತು. ಮುಖಾಮುಖಿ ಡಿಕ್ಕಿಯಾಗಿ ಬಸ್ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನರೇಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತರ ಗುರುತು ಪತ್ತೆ ಇನ್ನೂ ಆಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯಲ್ಲಾಪುರ: ಕಾರ್ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವು- ಭಯಾನಕ ದೃಶ್ಯ!