ಗ್ವಾಲಿಯಾರ್: ಮಧ್ಯಪ್ರದೇಶದ ಇಂಧನ ಸಚಿವರ ತವರು ಜಿಲ್ಲೆಯಾದ ಗ್ವಾಲಿಯರ್‌ನಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿದ್ಯುತ್ ಇಲಾಖೆಯು ವ್ಯಕ್ತಿಯೊಬ್ಬರಿಗೆ 3,419 ಕೋಟಿ ರೂ ವಿದ್ಯುತ್ ಬಿಲ್ ಕಳುಹಿಸಿದೆ. ಇದನ್ನು ನೋಡಿದ ಇಬ್ಬರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ಗ್ವಾಲಿಯರ್‌ನ ಐಷಾರಾಮಿ ಪ್ರದೇಶ ಶಿವ ಬಿಹಾರ ಕಾಲೋನಿಯಲ್ಲಿ ಪ್ರಿಯಾಂಕಾ ಗುಪ್ತಾ ಎಂಬುವವರ ಮನೆ ಇದೆ. ಇವರ ಪತ್ನಿ ಪ್ರಿಯಾಂಕಾ ಗೃಹಿಣಿಯಾಗಿದ್ದು, ಪತಿ ಸಂಜೀವ್ ವಕೀಲರು. ಈ ವಿದ್ಯುತ್ ಬಿಲ್ ಬಗ್ಗೆ ಮಾಹಿತಿ ನೀಡಿದ ಸಂಜೀವ್, "ಈ ಬಾರಿ ನನ್ನ ವಿದ್ಯುತ್ ಬಿಲ್ 3 ಸಾವಿರದ 419 ಕೋಟಿ ರೂ.ಗಿಂತ ಹೆಚ್ಚು ಬಂದಿದೆ. ಇದನ್ನು ನೋಡಿದ ಪತ್ನಿ ಪ್ರಿಯಾಂಕಾ ಮತ್ತು ತಂದೆ ರಾಜೇಂದ್ರ ಪ್ರಸಾದ್ ಗುಪ್ತಾಗೆ ರಕ್ತದೊತ್ತಡ ಹೆಚ್ಚಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಹೇಳಿದ್ದಾರೆ.
ಈ ಸುದ್ದಿ ತಿಳಿದ ವಿದ್ಯುಚ್ಛಕ್ತಿ ಇಲಾಖೆ ಕೂಡಲೇ ತಪ್ಪು ತಿದ್ದಿಕೊಂಡು ಪರಿಷ್ಕರಿಸಿದ 1,300 ರೂ. ರಶೀದಿ ಕಳುಹಿಸಿ ಕೊಟ್ಟಿದೆ. ವಿದ್ಯುತ್ ಕಂಪನಿಯ ಪ್ರಧಾನ ವ್ಯವಸ್ಥಾಪಕರು ಪ್ರತಿಕ್ರಿಯಿಸಿ, "ಬಿಲ್ ಕಳುಹಿಸುವಾಗ ದೋಷವಾಗಿದ್ದು, ಸರಿಪಡಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮವೂ ಆಗಿದೆ. ಪ್ರಕರಣದಲ್ಲಿ ಸಹಾಯಕ ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಿ, ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ" ಎಂದು ಹೇಳಿದರು.
ಸಚಿವರ ಪ್ರತಿಕ್ರಿಯೆ: ವಿದ್ಯುತ್ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಮಾತನಾಡಿ, "ತಪ್ಪು ಮಾಡಿರುವುದನ್ನು ತಕ್ಷಣವೇ ಸರಿಪಡಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಿಂತ ಇನ್ನೇನು ಬೇಕು? ಎಂದಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಬಿಲ್ ಹೆಚ್ಚಳ : ಸಿಟ್ಟಿಗೆದ್ದು ಹೈವೋಲ್ಟೇಜ್ ವಿದ್ಯುತ್ ತಂತಿ ಮೇಲೇರಿದ ವ್ಯಕ್ತಿ- ವಿಡಿಯೋ