ಭೋಪಾಲ್: ಕೊರೊನಾ ವೈರಸ್ ಎರಡನೇ ಅಲೆ ಹಾವಳಿಯಿಂದ ತತ್ತರಿಸಿ ಹೋಗಿದ್ದ ಮಧ್ಯಪ್ರದೇಶ ಇದೀಗ ನಿಯಂತ್ರಣಕ್ಕೆ ಬಂದಿದ್ದು, ಹೀಗಾಗಿ ಸದ್ಯ ಅನ್ಲಾಕ್ ಪ್ರಕ್ರಿಯೆಗೆ ಮುಂದಾಗಿದೆ.
ಜೂನ್ 1ರಿಂದ ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭ ಮಾಡುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಚೌಹಾಣ್, ರಾಜ್ಯದಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಕ್ರಿಯೆ ಮುಂದುವರೆಯಲಿದ್ದು, ಸೋಂಕಿತ ವ್ಯಕ್ತಿಯಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಸಿಬಿಐ ನೂತನ ನಿರ್ದೇಶಕರಾಗಿ ಐಪಿಎಸ್ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ
ರಾಜ್ಯದಲ್ಲಿ ಮೂರನೇ ಹಂತದ ಅಲೆ ಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಎಲ್ಲ ರೀತಿಯ ಮಾರ್ಗಸೂಚಿ ಪಾಲನೆ ಜತೆಗೆ ಅನ್ಲಾಕ್ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಕೊರೊನಾ ವ್ಯಾಕ್ಸಿನ್ ನೀಡುವ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಲಿದ್ದು, ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಎಲ್ಲ ಸಚಿವರು ತಮಗೆ ಉಸ್ತುವಾರಿ ನೀಡಿರುವ ಜಿಲ್ಲೆಗಳಿಗೆ ಭೇಟಿ ನೀಡುವುದನ್ನ ಕಡ್ಡಾಯಗೊಳಿಸಲಾಗಿದ್ದು, ಅಲ್ಲಿನ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಮಧ್ಯಪ್ರದೇಶದಲ್ಲಿ ನಿನ್ನೆ 2,422 ಕೋವಿಡ್ ಸೋಂಕಿತ ಪ್ರಕರಣ ದಾಖಲಾಗಿದ್ದು, 7,373 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.