ರಾಂಬನ್ (ಜಮ್ಮು ಮತ್ತು ಕಾಶ್ಮೀರ): ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು ಪ್ರವಾಸಿಗಳು ತೊಂದರೆಯಲ್ಲಿ ಸಿಲುಕಿ ಕೊಳ್ಳುತ್ತಿದ್ದಾರೆ. ಅಧಿಕ ಪ್ರಮಾಣದ ಮಳೆಯಿಂದ ರಸ್ತೆಗಳ ಮೇಲೆ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತವಾಗಿದೆ. ರಾಂಬನ್ ಮತ್ತು ಬನ್ಹಾಲ್ ನಡುವಿನ ಹೆದ್ದಾರಿಯಲ್ಲಿ ಕಲ್ಲು ಮತ್ತು ಮಣ್ಣು ಕುಸಿದಿರುವ ಕಾರಣ 270 ಕಿಮೀ ಉದ್ದದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮೂರು ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಗಿದೆ.
ಹೀಗಿರುವಾಗ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಸತೀಶ್ (59) ಎಂಬುವರು ಪ್ರವಾಸಿ ಶಿಬಿರದಲ್ಲಿ ಎದೆನೋವಿನಿಂದ ಮೂರ್ಛೆ ಹೋಗಿದ್ದರು. ಅವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರಗೆ ಸೇರಿಸಲಾಯಿತಾದರೂ ದಾರಿ ನಡುವೆಯೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವೈದ್ಯರು ದೃಢ ಪಡಿಸಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಗೋವಿಂದ್ ರಾಮ್ ಅವರ ಪುತ್ರ 59 ವರ್ಷದ ಸತೀಶ್ ಹೃದಯಾಘಾತದಿಂದ ಸಾವನ್ನಪ್ಪಿದ ಯಾತ್ರಾತ್ರಿಯಾಗಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಭೀಕರ ಪ್ರವಾಹ.. ಹಲವು ಪ್ರದೇಶಗಳು ಜಲಾವೃತ: ವಿಡಿಯೋ
ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ರಾಜಧಾನಿ ದೆಹಲಿ, ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಉತ್ತರದ ಹಲವೆಡೆ ನಿರಂತರ ಮಳೆ ಸುರಿಯುತ್ತಿದೆ. ಪಂಜಾಬ್ ಭೀಕರ ಪ್ರವಾಹಕ್ಕೆ ಸಿಲುಕಿದೆ. ಧಾರಾಕಾರ ಮಳೆಯಿಂದಾಗಿ ರಾಜ್ಯದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ಹಿಮಾಚಲ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ರಾಜ್ಯದಲ್ಲಿ ಹಲವು ಅನಾಹುತಗಳನ್ನು ಉಂಟುಮಾಡುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಅಂದಾಜು 100 ವರ್ಷಗಳಷ್ಟು ಹಳೆಯ ಐತಿಹಾಸಿಕ ಸೇತುವೆ ಪ್ರವಾಹದಿಂದ ಹಾನಿಗೊಳಗಾಗಿದೆ.
ಮಂಡಿ ಜಿಲ್ಲೆಯಲ್ಲಿರುವ ಈ ಸೇತುವೆ ಬಿಯಾಸ್ ಹಾಗೂ ಸುಕೇತಿ ಖಾಡ್ ನದಿಯ ಪ್ರವಾಹಕ್ಕೆ ನಾಶವಾಗಿದೆ. ಇದರೊಂದಿಗೆ ಇತರ ನಾಲ್ಕು ಸೇತುವೆಗಳು ಸಹ ನೀರುಪಾಲಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದವಾಡದ ಕಾಲು ಸೇತುವೆ ಕೂಡ ಬಿಯಾಸ್ ನದಿನೀರು ಸೇರಿದೆ. ಪಾಂಡೋ- ಶಿವಬ್ದಾರ್ ಸೇತುವೆ ಭಾನುವಾರ ಸಂಜೆ ಪ್ರವಾಹದಿಂದ ನಾಶವಾಗಿದೆ. ಕೂನ್‌ನ ಮಂಡಿ ಸದರ್ ಮತ್ತು ಜೋಗಿಂದರ್‌ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೂಡಾ ಕುಸಿದುಬಿದ್ದಿದೆ.
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಹಲವೆಡೆ ಭೂಕುಸಿತವಾಗಿದೆ. ಸಾಕಷ್ಟು ಮನೆಗಳಿಗೂ ಹಾನಿಯಾಗಿದೆ. ಶಿಮ್ಲಾ ಜಿಲ್ಲೆಯ ಕೋಟ್‌ಗಢ ಪ್ರದೇಶದಲ್ಲಿ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಲು ಪಟ್ಟಣದ ಸಮೀಪ ಭೂಕುಸಿತದಿಂದ ಮಹಿಳೆ ಅಸನೀಗಿದ್ದಾರೆ. ಚಂಬಾದ ಕಟಿಯಾನ್ ತೆಹ್ಸಿಲ್‌ನಲ್ಲಿ ಶನಿವಾರ ರಾತ್ರಿ ಮನೆ ಕುಸಿದು ವ್ಯಕ್ತಿಯೊಬ್ಬರು ಜೀವಂತ ಸಮಾಧಿಯಾಗಿದ್ದಾರೆ.
ಕಳೆದ 36 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ 13 ಕಡೆ ಭೂಕುಸಿತ ಮತ್ತು 9 ಮಹಾ ಪ್ರವಾಹಗಳು ವರದಿಯಾಗಿವೆ. ಭಾನುವಾರ ಬೆಳಗಿನ ಜಾವದವರೆಗೆ 736 ರಸ್ತೆಗಳ ಸಂಚಾರ ಸ್ಥಗಿತಗೊಂಡಿದ್ದು, 1,743 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಗುಡ್ಡ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್..