ಡೆಹ್ರಾಡೂನ್(ಉತ್ತರಾಖಂಡ): "ದೇಶದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ನಾಶ ಮತ್ತು ಭಾರತೀಯರನ್ನು ಮಾನಸಿಕವಾಗಿ ಗುಲಾಮರನ್ನಾಗಿ ಮಾಡಲು ಮೆಕಾಲೆಯನ್ನು ಭಾರತಕ್ಕೆ ಕಳುಹಿಸಲಾಗಿತ್ತು" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
"ಭಾರತೀಯರ ಬೌದ್ಧಿಕ ಮತ್ತು ಮಾನಸಿಕ ಶಕ್ತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಲು ಮೆಕಾಲೆ ಶಿಕ್ಷಣ ಪದ್ಧತಿಯನ್ನು ಇಲ್ಲಿ ಜಾರಿ ಮಾಡಲಾಯಿತು. ಅವುಗಳಿಂದ ನಾವು ಮುಕ್ತಿ ಪಡೆಯಬೇಕಾದರೆ, ನಮ್ಮ ಪರಂಪರೆಯಾದ 'ಗುರುಕುಲ'ಗಳ ಪುನರುಜ್ಜೀವನದ ಅಗತ್ಯವಿದೆ. ಅವುಗಳು ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ವಾಂಟಮ್ ತಂತ್ರಜ್ಞಾನವನ್ನು ಒಳಗೊಂಡಿರಬೇಕು" ಎಂದು ಸಲಹೆ ನೀಡಿದರು.
ಪರಂಪರೆ ಹಾಳುಗೆಡವಿದ ಮೆಕಾಲೆ: ಹರಿದ್ವಾರದಲ್ಲಿ ಪತಂಜಲಿ ಆರಂಭಿಸಿರುವ ಗುರುಕುಲದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಶ್ರೀಮಂತಿಕೆಯನ್ನು ಕಡೆಗಣಿಸುವ ಮೆಕಾಲೆಯ ಧೋರಣೆಯನ್ನು ಖಂಡಿಸಿದ ಕೇಂದ್ರ ಸಚಿವರು, "ಬ್ರಿಟಿಷ್ ಅಧಿಕಾರಿ ಒಮ್ಮೆ ಯುರೋಪಿಯನ್ ಲೈಬ್ರರಿಯಲ್ಲಿನ ಒಂದು ಕಪಾಟನ್ನು ಭಾರತದ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಂಪರೆಗಿಂತ ದೊಡ್ಡದು ಎಂದು ಹೇಳಿದ್ದರು. ಇದು ಬ್ರಿಟಿಷರ ಮಾನಸಿಕತೆಯನ್ನು ತೋರಿಸುತ್ತದೆ" ಎಂದರು.
"ವೇದಗಳು, ಉಪನಿಷತ್ತುಗಳು ಮತ್ತು ಗೀತೆಗಳನ್ನು ರಚಿಸಿದ ದೇಶದ ಬಗ್ಗೆ ಬ್ರಿಟಿಷರು ತಾತ್ಸಾರ ಮನೋಭಾವ ಹೊಂದಿದ್ದರು. ಮೆಕಾಲೆ ಪರಿಚಯಿಸಿದ ಶಿಕ್ಷಣ ವ್ಯವಸ್ಥೆಯಿಂದ ನಮ್ಮ ಅಂತರ್ಗತ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಕೀಳರಿಮೆ ಬೆಳೆಸಿತು. ಮಹರ್ಷಿ ದಯಾನಂದ ಸರಸ್ವತಿ ಮತ್ತು ಸ್ವಾಮಿ ದರ್ಶನಾನಂದರು ಭಾರತದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯನ್ನು ಮುಂದುವರಿಸಲು ಮತ್ತು ಅದರ ವೈಭವವನ್ನು ಮರುಸ್ಥಾಪಿಸಲು 'ಗುರುಕುಲ'ಗಳಂತಹ ಸಂಸ್ಥೆಗಳನ್ನು ಸ್ಥಾಪಿಸಿದರು" ಎಂದು ಹೇಳಿದರು.
"ಇಂದಿನ ಮಕ್ಕಳಿಗೆ ಗುರುಕುಲಗಳನ್ನು ಮತ್ತೆ ಪರಿಚಯಿಸಬೇಕಿದೆ. ನವ ಭಾರತಕ್ಕೆ ಗುರುಕುಲಗಳ ಅಗತ್ಯವಿದೆ. ಆದರೆ, ಅಲ್ಲಿ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಉದಯೋನ್ಮುಖ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು" ಎಂದು ಹೇಳಿದರು. ಇದೇ ವೇಳೆ, ಪತಂಜಲಿ ಸಂಸ್ಥೆಯು ಸ್ವಾಮಿ ದರ್ಶನಾನಂದರ ಹೆಸರಿನಲ್ಲಿ ಗುರುಕುಲ ಸ್ಥಾಪಿಸಿದ್ದನ್ನು ಕೇಂದ್ರ ಸಚಿವರು ಶ್ಲಾಘಿಸಿದರು.
ಯೋಗ ಪ್ರಚಾರಕ್ಕೆ ಮೆಚ್ಚುಗೆ: ದೈಹಿಕ ಮತ್ತು ಮಾನಸಿಕ ಸಕ್ಷಮತೆ ಕಾಪಾಡುವ ಯೋಗವನ್ನು ದೇಶ- ವಿದೇಶಗಳಲ್ಲಿ ಹರಡುತ್ತಿರುವ ಪತಂಜಲಿ ಸಂಸ್ಥೆಯ ಮುಖ್ಯಸ್ಥರಾದ ಬಾಬಾ ರಾಮ್ದೇವ್ ಅವರನ್ನು ಹೊಗಳಿದ ರಾಜನಾಥ್ ಸಿಂಗ್, "ಯೋಗವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ರಾಮದೇವ್ ಅಭಿನಂದನಾರ್ಹರು. ಇಂದು ದೇಶ- ವಿದೇಶಗಳಲ್ಲಿ ಯೋಗಾಸನ ಪಾಲಿಸುವುದನ್ನು ಕಾಣಬಹುದು. ವಿಶ್ವಸಂಸ್ಥೆ ಜೂನ್ 21ನೇ ತಾರೀಖನ್ನು 'ಅಂತಾರಾಷ್ಟ್ರೀಯ ಯೋಗ ದಿನ'ವನ್ನಾಗಿ ಘೋಷಿಸಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಶ್ರಮವಿದೆ" ಎಂದರು.
ಇದನ್ನೂ ಓದಿ: ಅದ್ಭುತ ವಿದೇಶಾಂಗ ನೀತಿಗೆ 'ರಾಮಾಯಣ'ದ ನಿದರ್ಶನ ಕೊಟ್ಟ ಡಾ.ಎಸ್.ಜೈಶಂಕರ್