ತಿರುವನಂತಪುರಂ(ಕೇರಳ): ತಮಿಳುನಾಡಿನ ನಾಗರ್ಕೋಯಿಲ್ ಜಿಲ್ಲೆಯ 37 ವರ್ಷದ ಮಹಿಳೆ ಸೇರಿದಂತೆ ಐದು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಸೀರಿಯಲ್ ಕಿಲ್ಲರ್ವೋರ್ವನ ಬಂಧನ ಮಾಡುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ. 39 ವರ್ಷದ ರಾಜೇಶ್ ಬಂಧಿತ ಆರೋಪಿಯಾಗಿದ್ದಾನೆ.
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಹಾಗೂ ಎಂಬಿಎ ಪದವಿ ಪಡೆದುಕೊಂಡಿರುವ ಈ ಸರಣಿ ಹಂತಕ, ಕೊಲೆ ಮಾಡಿದ ಸ್ಥಳದಲ್ಲಿ ದರೋಡೆ ಮಾಡಿದ ಹಣ ಹಾಗೂ ಚಿನ್ನದಿಂದ ಆನ್ಲೈನ್ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡುತ್ತಿದ್ದನು. ತಮಿಳುನಾಡಿನಲ್ಲಿ ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಈತನಿಗೆ ಇಲ್ಲಿಯವರೆಗೆ ಯಾವುದೇ ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ. ಕಳೆದ ಕೆಲ ದಿನಗಳಿಂದ ಚಹಾ ಅಂಗಡಿವೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್, ಕಳೆದ ಭಾನುವಾರ ಮಹಿಳೆಯೋರ್ವಳ ಕೊಲೆ ಮಾಡಿದ್ದನು. ಆಕೆಯ ಕೊರಳಲ್ಲಿನ ಚಿನ್ನದ ಸರ ಕದ್ದು ಪರಾರಿಯಾಗಿದ್ದನು. ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಈತನ ದೃಶ್ಯ ಸೆರೆಯಾಗಿತ್ತು.
ಇದನ್ನೂ ಓದಿರಿ: ದಕ್ಷಿಣ ಕನ್ನಡ: ಶಾಲಾ ಕೊಠಡಿಯಲ್ಲಿ ನಮಾಜ್... ಸೌಹಾರ್ದಯುತವಾಗಿ ಮುಗಿದ ಪ್ರಕರಣ
ನರ್ಸರಿ ಉದ್ಯೋಗಿಯಾಗಿದ್ದ ವಿನೀತಾಳ ಕೊಲೆ ಮಾಡಿದ್ದ ರಾಜೇಶ್ ಈಗಾಗಲೇ ನಾಲ್ಕು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿನೀತಾಳ ಕೊರಳಲ್ಲಿದ್ದ ಸರ ಅಡವಿಟ್ಟು ಅದರಿಂದ 95 ಸಾವಿರ ರೂ. ನಗದು ಪಡೆದುಕೊಂಡಿದ್ದನು. ಇದರಲ್ಲಿ 32 ಸಾವಿರ ರೂ. ಆನ್ಲೈನ್ ಟ್ರೇಡಿಂಗ್ನಲ್ಲಿ ಹಾಕಿದ್ದಾಗಿ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಣ ಪಡೆದುಕೊಂಡಿದ್ದರೂ, ಹಣದ ದುರಾಸೆಗೋಸ್ಕರ ಆತ ಸರಣಿ ಹಂತಕನಾಗಿದ್ದು, 2014ರಲ್ಲಿ ತಮಿಳುನಾಡಿನಲ್ಲಿ ಕಸ್ಟಮ್ಸ್ ಅಧಿಕಾರಿ ಹಾಗೂ ಆತನ ಕುಟುಂಬದ ಮೂವರು ಸದಸ್ಯರ ಕೊಲೆ ಮಾಡಿದ್ದನು. ಈ ಪ್ರಕರಣದ ವಿಚಾರಣೆ ಆರಂಭವಾಗುವುದಕ್ಕೂ ಮುನ್ನವೇ ಕೇರಳಕ್ಕೆ ಬಂದಿದ್ದನು. ಇದೀಗ ವಿನೀತಾಳ ಕೊಲೆ ಮಾಡಿದ್ದಾನೆ. ಈತನ ಬಂಧನ ಮಾಡುವಲ್ಲಿ ಯಶಸ್ವಿಯಾಗಿರುವ ಕೇರಳ ಪೊಲೀಸರು ತನಿಖೆ ಮುಂದುವರೆಸಿದ್ದು, ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿದ್ದಾರೆ.