ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬಂಧಿಸುವ ಬಗ್ಗೆ ಬ್ರೆಜಿಲ್ ಸರ್ಕಾರ ಅಥವಾ ಸಂಸತ್ತು ನಿರ್ಧರಿಸಲು ಆಗುವುದಿಲ್ಲ. ಮುಂದಿನ ವರ್ಷ ನಡೆಯುವ ಶೃಂಗಸಭೆಯಲ್ಲಿ ಭಾಗವಹಿಸುವ ವೇಳೆ ಬಂಧಿಸಬೇಕೇ ಎಂಬುದನ್ನು ಬ್ರೆಜಿಲ್ ನ್ಯಾಯಾಂಗ ನಿರ್ಧರಿಸಲಿದೆ ಎಂದು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಹೇಳಿದ್ದಾರೆ.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ವರ್ಷ ಬ್ರೆಜಿಲ್ನ ಅಧ್ಯಕ್ಷತೆಯಲ್ಲಿ ರಿಯೊ ಡಿ ಜನೈರೊದಲ್ಲಿ ಜಿ20 ಶೃಂಗಸಭೆ ನಡೆಯಲಿದೆ. 19ನೇ ಶೃಂಗಸಭೆಯಲ್ಲಿ ಜಿ20 ಒಕ್ಕೂಟದ ಎಲ್ಲಾ ಸದಸ್ಯ ರಾಷ್ಟ್ರಗಳ ನಾಯಕರು ಭಾಗವಹಿಸುತ್ತಾರೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿ ಮುಂದಿನ ವರ್ಷ ನಡೆಯಲಿರುವ ಶೃಂಗಸಭೆಯ ವೇಳೆಗೆ ರಷ್ಯಾ- ಉಕ್ರೇನ್ ನಡುವಿನ ಸಂಘರ್ಷ ಕೊನೆಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವದ ನಾಯಕರಿಗೆ ಶೃಂಗಸಭೆ ಹಿನ್ನೆಲೆ ಭಾರತವು ಉತ್ತಮ ಆದರಾತಿಥ್ಯವನ್ನು ನೀಡಿತು. ಜೊತೆಗೆ ನವದೆಹಲಿಯಲ್ಲಿ ಶೃಂಗಸಭೆಯನ್ನು ಸಂಘಟಿತವಾಗಿ ಆಯೋಜಿಸಿದ್ದಕ್ಕೆ ಭಾರತವನ್ನು ಶ್ಲಾಘಿಸಿದರು. ಬ್ರೆಜಿಲ್ನಲ್ಲಿ ನಡೆಯುವ ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ವಿಶೇಷ ಆತಿಥ್ಯ ನೀಡಲಾಗುವುದು. ಬ್ರೆಜಿಲ್ ಜಿ20 ಶೃಂಗಸಭೆಯನ್ನು ಅತ್ಯಂತ ಶಾಂತಿಯುತವಾಗಿ ಆಯೋಜಿಸುತ್ತದೆ. ಈ ಜಿ20 ಶೃಂಗಸಭೆಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.
ನಾನು ಐಸಿಸಿ ಒಪ್ಪಂದದ ಸಮಸ್ಯೆಯನ್ನು ಅಧ್ಯಯನ ಮಾಡಲು ಬಯಸುತ್ತೇನೆ. ಏಕೆಂದರೆ ಅಮೆರಿಕ ಮತ್ತು ರಷ್ಯಾ ಐಸಿಸಿ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಜೊತೆಗೆ ಭಾರತವು ಯಾಕೆ ಒಪ್ಪಂದಕ್ಕೆ ಸಹಿ ಹಾಕಿಲ್ಲ ಮತ್ತು ಬ್ರೆಜಿಲ್ ಯಾಕೆ ಸಹಿ ಹಾಕಿದೆ ಎಂದು ತಿಳಿಯಲು ಬಯಸುತ್ತೇನೆ. ಇವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಾನಿಯನ್ನುಂಟು ಮಾಡುವ ವಿಷಯಗಳಾಗಿವೆ ಎಂದು ಬ್ರೆಜಿಲ್ ಅಧ್ಯಕ್ಷ ಲುಲಾ ಅಭಿಪ್ರಾಯಪಟ್ಟರು.
ರಷ್ಯಾದ ಅಧ್ಯಕ್ಷ ಪುಟಿನ್ ಬಗ್ಗೆ ಪ್ರತಿಕ್ರಿಯಿಸಿ, ಪುಟಿನ್ ಅವರು ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿರಲಿಲ್ಲ.ಇಲ್ಲಿ ನಡೆದ ಸಭೆಯಲ್ಲಿ ರಷ್ಯಾದ ವಿದೇಶಾಂಗ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು. ಅವರ ಬಂಧನದ ಬಗ್ಗೆ ಬ್ರೆಜಿಲ್ ನ್ಯಾಯಾಂಗ ನಿರ್ಧರಿಸುತ್ತದೆ ಎಂದು ಹೇಳಿದರು. ಕಳೆದ ಮಾರ್ಚ್ ತಿಂಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಸಂಘರ್ಷ ಸಂಬಂಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡಿ ಪುಟಿನ್ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.
ಸೆಪ್ಟೆಂಬರ್ 9 ಮತ್ತು 10 ರಂದು ಭಾರತ ತನ್ನ ಅಧ್ಯಕ್ಷತೆಯಲ್ಲಿ G20 ಶೃಂಗಸಭೆಯನ್ನು ಆಯೋಜಿಸಿತ್ತು. ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಹಲವು ದೇಶಗಳ ಗಣ್ಯಾತಿಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : 18ನೇ ಜಿ-20 ಶೃಂಗಸಭೆ: ಜಾಗತಿಕ ವೇದಿಕೆಯಲ್ಲಿ ಭಾರತ ಗಳಿಸಿದ್ದೇನು?.. ವಿಶ್ವಕ್ಕೆ ಕೊಟ್ಟ ಸಂದೇಶ ಯಾವುದು?