ನಾಸಿಕ್ (ಮಹಾರಾಷ್ಟ್ರ): ಎಕ್ಸ್‌ಪ್ರೆಸ್ ರೈಲೊಂದು ಹಳಿ ತಪ್ಪಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಬಳಿ ಭಾನುವಾರ(ಇಂದು) ಮಧ್ಯಾಹ್ನ ಸಂಭವಿಸಿದೆ. ಆದರೆ, ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ಪ್ರಾಣಾಪಾಯವಾಗಿಲ್ಲ. ಇಬ್ಬರಿಗೆ ಮಾತ್ರ ಸಣ್ಣ-ಪುಟ್ಟಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಮಧ್ಯಾಹ್ಮ 3.10ರ ಸುಮಾರಿಗೆ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್-ಜಯನಗರ ಅಂತ್ಯೋದಯ ಎಕ್ಸ್‌ಪ್ರೆಸ್ (11061) ಇಲ್ಲಿನ ಲಹವಿತ್ ಮತ್ತು ದೇವಲಾಲಿ ಮಾರ್ಗ ಮಧ್ಯೆ ಹಳಿ ತಪ್ಪಿವೆ. ಸುಮಾರು 10 ಬೋಗಿಗಳು ಹಳಿ ಬಿಟ್ಟಿದ್ದು, ಅದೃಷ್ಟವಶಾತ್ ಯಾವುದೇ ಭಾರಿ ದುರಂತ ನಡೆದಿಲ್ಲ.
ವಿಷಯ ತಿಳಿದ ರೈಲ್ವೆ ಪೊಲೀಸರು ಮತ್ತು ತಹಶೀಲ್ದಾರ್ ಹಾಗೂ ಪರಿಹಾರ, ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿ, ಪರಿಹಾರ ಕಾರ್ಯ ನಡೆಸಲಾಯಿತು. ರೈಲಿನಲ್ಲಿದ್ದ ಪ್ರಯಾಣಿಕರಿಗೆ ಬಸ್ಗಳು ಮತ್ತು ವಿಶೇಷ ವಾಹನಗಳ ವ್ಯವಸ್ಥೆ ಮಾಡಿ ನಾಸಿಕ್ಗೆ ತಲುಪಿಸಲಾಯಿತು. ಈ ರೈಲು ಹಳಿ ತಪ್ಪಿದ ಕಾರಣ ಈ ಮಾರ್ಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುಂಬೈ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ಸೇರಿ ಐದು ರೈಲುಗಳ ಮಾರ್ಗ ಬದಲಾಯಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿ ಅವಘಡದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿತ್ತು. ಆದರೆ, ಇದನ್ನೂ ರೈಲ್ವೆ ಅಧಿಕಾರಿಗಳು ನಿರಾಕರಿಸಿದ್ದು, ಸ್ಥಳದಲ್ಲಿ ಒಂದು ಮೃತದೇಹ ದೊರೆತಿದೆ ನಿಜ. ಆದರೆ, ಅದು ರೈಲಿನಲ್ಲಿದ್ದ ಪ್ರಯಾಣಿಕನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಜಡ್ಜ್ ಸಾವು