ಶ್ರೀನಗರ(ಜಮ್ಮು ಕಾಶ್ಮೀರ್) : ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ ಅವರನ್ನು ಶ್ರೀನಗರದಲ್ಲಿರುವ 15 ಚಿನಾರ್ ಕಾರ್ಪ್ಸ್‌ನ 51ನೇ ಕಮಾಂಡರ್ ಆಗಿ ನೇಮಿಸಲಾಗಿದೆ. 1987ರಲ್ಲಿ ಭಾರತೀಯ ಸೇನೆಗೆ ಇವರನ್ನು ನಿಯೋಜನೆ ಮಾಡಲಾಗಿತ್ತು. ಸೇನಾ ಮೂಲಗಳ ಪ್ರಕಾರ, ಲೆಫ್ಟಿನೆಂಟ್ ಜನರಲ್ ಔಜ್ಲಾ ಅವರು ಕಾಶ್ಮೀರ್ ಕಣಿವೆಯಲ್ಲಿ ಒಂದು ವಿಭಾಗಕ್ಕೆ ಕಮಾಂಡರ್ ಆಗಿದ್ದು, ಭಯೋತ್ಪಾದನೆ ನಿಗ್ರಹ ಮತ್ತು ಒಳನುಸುಳುವಿಕೆಯನ್ನು ತಡೆಯುವ ಕಾರ್ಯಾಚರಣೆಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ.
ಲೆಫ್ಟಿನೆಂಟ್ ಜನರಲ್ ಔಜ್ಲಾ ಅವರು ಮುಂದಿನ ತಿಂಗಳೊಳಗೆ 15 ಕಾರ್ಪ್ಸ್‌ನ ಕಮಾಂಡ್ ಅನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ. ಅವರು ಈ ಹಿಂದೆ ಕುಪ್ವಾರದಲ್ಲಿ 268 ಇನ್ಫ್ ಬ್ರಿಗೇಡ್ ಮತ್ತು 28 ಇನ್ಫ್ ಡಿವಿ ಎರಡನ್ನೂ ಕಮಾಂಡ್ ಮಾಡಿದ್ದಾರೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಔಜ್ಲಾ ತಮ್ಮ ಶೌರ್ಯಕ್ಕಾಗಿ ಎಸ್‌ಎಂ, ವಿಎಸ್‌ಎಂ, ವೈಎಸ್‌ಎಂ ಪದಕಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗ ಚಿನಾರ್ ಕಾರ್ಪ್ಸ್‌ನಲ್ಲಿ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಲೆಫ್ಟಿನೆಂಟ್ ಆಗಿರುವ ದೇವೇಂದ್ರ ಪ್ರತಾಪ್ ಪಾಂಡೆ ಅವರು, ಮೊವ್‌ನಲ್ಲಿರುವ ಆರ್ಮಿ ವಾರ್ ಕಾಲೇಜಿಗೆ ಕಮಾಂಡೆಂಟ್ ಆಗಿ ತೆರಳುತ್ತಿದ್ದಾರೆ. ಇವರ ಜಾಗಕ್ಕೆ ಔಜ್ಲಾ ಅವರು ನೇಮಕಗೊಳ್ಳುತ್ತಿದ್ದಾರೆ. ಚಿನಾರ್ ಕಾರ್ಪ್ಸ್ ಕಾಶ್ಮೀರ್ ಕಣಿವೆಯಲ್ಲಿ ಮತ್ತು ಪಾಕಿಸ್ತಾನದ ನಿಯಂತ್ರಣ ರೇಖೆಯ ಉದ್ದಕ್ಕೂ ಭಯೋತ್ಪಾದನೆ ಮತ್ತು ಒಳನುಸುಳುವಿಕೆ ತಡೆಯುವ ಕಾರ್ಯಾಚರಣೆಗಳನ್ನು ನಡೆಸಲು ಇರುವ ಭಾರತೀಯ ಸೇನೆಯ ಭಾಗವಾಗಿದೆ.
ಇದನ್ನೂ ಓದಿ: ಅಮೆರಿಕ ಜೊತೆ ಉತ್ತಮ ಸೇನಾ ಸಂಬಂಧ ಗಳಿಸುವಲ್ಲಿ ಪಾಕಿಸ್ತಾನ ಹೆಜ್ಜೆ