ನವದೆಹಲಿ: ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಈ ಮಧ್ಯೆ ತೈಲ ಕಂಪನಿಗಳು ಜನಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಿವೆ. ಎಲ್‌ಪಿಜಿ ಸಿಲಿಂಡರ್ಗಳ ಬೆಲೆ 25 ರೂ.ಹೆಚ್ಚಿಸಿದ್ದು, ಪರಿಷ್ಕೃತ ದರದಂತೆ ದೆಹಲಿಯಲ್ಲಿ ಸಿಲಿಂಡರ್ ದರ 834.50 ರೂ.ಗೆ ಏರಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿ ಎಲ್‌ಪಿಜಿ ಬೆಲೆ 14.2 ಕೆಜಿ ಸಿಲಿಂಡರ್‌ಗೆ 140 ರೂ.ಹೆಚ್ಚಳವಾಗಿದೆ
ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಕಳೆದ ವರ್ಷ ನವೆಂಬರ್‌ನಿಂದ ನಿರಂತರವಾಗಿ ಏರಿಕೆಯಾಗುತ್ತಿವೆ. ಭಾರತವು ಹೆಚ್ಚಾಗಿ ಕಚ್ಚಾ ತೈಲದ ಆಮದು ಮೇಲೆ ಅವಲಂಬಿತವಾಗಿರುವುದರಿಂದ ಮತ್ತು ಬೆಲೆಗಳು ಮಾರುಕಟ್ಟೆಗೆ ಸಂಬಂಧಿಸಿರುವುದರಿಂದ, ಅಂತಾರಾಷ್ಟ್ರೀಯ ಬೆಲೆಗಳ ಹೆಚ್ಚಳವು ಪೆಟ್ರೋಲಿಯಂ ಉತ್ಪನ್ನಗಳ ದೇಶೀಯ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ಗಳ ಬೆಲೆ ಪರಿಷ್ಕರಣೆ ಅಗತ್ಯ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಈ ಮೊದಲು ಮೇ 1ರಂದು ಗ್ಯಾಸ್ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು 10 ರೂಪಾಯಿ ಇಳಿಕೆ ಮಾಡಿದ್ದ ನಂತರ ಏಪ್ರಿಲ್ನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗಿತ್ತು.
ದೇಶದ ಮಹಾನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಹೀಗಿದೆ:
ಮುಂಬಯಿಯಲ್ಲಿ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 809 ರೂಪಾಯಿ ಇದ್ದಿದ್ದು, ಈಗ 834.50 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 812 ರೂಪಾಯಿ ಇದ್ದಿದ್ದು, ಈಗ 836.50 ರೂಪಾಯಿಗೆ ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ 835.50 ರೂ. ಇದ್ದಿದ್ದು, ಈಗ 861 ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ:ಹನ್ನೊಂದು ರಾಜ್ಯಗಳಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ದರ.. ಎಲ್ಲೆಲ್ಲಿ ಎಷ್ಟಿದೆ ತೈಲ ಬೆಲೆ?