ಗುಂಟೂರು: ಮತಗಳು ಬೇರೆಯಾದ್ರೂ ಮನಸ್ಸುಗಳು ಒಂದಾದವು. ಇವರ ಪ್ರೇಮಕ್ಕೆ ಕುಟುಂಬಸ್ಥರೇ ಅಡ್ಡಿ ಪಡಿಸಿದ್ರೂ ಅವೆಲ್ಲವನ್ನೂ ದಾಟಿ ಪ್ರೇಮ ವಿವಾಹ ಮಾಡಿಕೊಂಡರು. ಆದರೆ, ಮದುವೆಯಾಗಿ ಕೇವಲ ಒಂದೇ ಗಂಟೆಯಲ್ಲಿ ಇಬ್ಬರು ದೂರವಾಗಿದ್ದಾರೆ. ಇಂತಹದೊಂದು ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಫಿರಂಗಿಪುರಂ ತಾಲೂಕಿನ ಕಂಡ್ರಿಗ ನಿವಾಸಿ ಚಂದು ಎಂಬಾತ ಚೆತಪೂಡಿ ನಿವಾಸಿ ಕಾಸರ್ ಎಂಬಾಕೆಯನ್ನು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಈ ವಿಷಯ ಕುಟುಂಬಸ್ಥರಿಗೆ ತಿಳಿದಿದ್ದು, ಇವರ ಪ್ರೇಮ ವಿವಾಹವನ್ನು ನಿರಾಕರಿಸಿದ್ದಾರೆ.
ಎಸ್ಪಿ ಮೊರೆ ಹೋಗಿದ್ದ ಜೋಡಿಹಕ್ಕಿ
ಇವರಿಬ್ಬರು ಹಿರಿಯರ ವಿರೋಧದ ನಡುವೆ ಜುಲೈ 19ರಂದು ಮದುವೆ ಮಾಡಿಕೊಂಡಿದ್ದಾರೆ. ಬಳಿಕ ಹಿರಿಯರಿಂದ ನಮಗೆ ಸಮಸ್ಯೆ ತಪ್ಪಿದಲ್ಲ ಎಂದು ತಿಳಿದ ಪ್ರೇಮಿಗಳು ಗುಂಟೂರು ಜಿಲ್ಲಾ ಎಸ್ಪಿಯನ್ನು ಭೇಟಿ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಎಸ್ಪಿ ಆದೇಶದ ಮೇರೆಗೆ ಫಿರಂಗಿ ಪುರಂ ಪೊಲೀಸರು ಎರಡು ಕುಟುಂಬಸ್ಥರನ್ನು ಕರೆಸಿ ಬುದ್ಧಿ ಮಾತುಗಳು ಹೇಳಿ ವಾಪಸ್ ಮನೆಗೆ ಕಳುಹಿಸಿದ್ದಾರೆ.
ಯುವಕನ ಮೇಲೆ ಯುವತಿ ಕಡೆಯವರ ದಾಳಿ
ನವದಂಪತಿ ಪೊಲೀಸ್ ಠಾಣೆಯಿಂದ ಆಟೋದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಯುವತಿ ಕಡೆಯವರು ಯುವಕನ ಮೇಲೆ ದಾಳಿ ಮಾಡಿದ್ದಾರೆ. ಬಳಿಕ ಯುವತಿಯನ್ನು ಬಲವಂತವಾಗಿ ಬೈಕ್ ಮೇಲೆ ಕರೆದೊಯ್ದರು. ಈ ಘಟನೆಯಲ್ಲಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಂದು ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಎರಡ್ಮೂರು ದಿನಗಳವಾದ್ರೂ ನನ್ನ ಹೆಂಡ್ತಿಯ ಸುಳಿವೇ ಸಿಗುತ್ತಿಲ್ಲ. ಅವಳು ಬದುಕಿದ್ದಾಳೋ.. ಸತ್ತಿದ್ದಾಳೋ... ತಿಳಿಯುತ್ತಿಲ್ಲ ಎಂದು ಚಂದು ಹೇಳಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.