ತಿರುವನಂತಪುರಂ: ಕೇರಳದಲ್ಲಿ ‘ಲವ್ ಜಿಹಾದ್’ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದಿಂದ ಅಫ್ಘಾನಿಸ್ತಾನಕ್ಕೆ ತೆರಳಿದ್ದ ನಾಲ್ವರು ಮಹಿಳೆಯರಿಗೆ ವಾಪಸ್ಸಾಗಲು ಕೇಂದ್ರ ಸರ್ಕಾರವು ಅನುಮತಿ ನಿರಾಕರಿಸಿದೆ ಎಂಬ ವರದಿಗಳು ಕೇಳಿಬಂದಿವೆ.
ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯಿಷಾ, ಮೆರಿನ್ ಜಾಕೋಬ್ ಅಲಿಯಾಸ್ ಮೆರಿನ್, ನಿಮಿಶಾ ನಾಯರ್ ಅಲಿಯಾಸ್ ಫಾತಿಮಾ ಇಸಾ, ಮತ್ತು ರಫೇಲಾ ಎಂಬ ನಾಲ್ಕು ಮಹಿಳೆಯರು ತಮ್ಮ ಕುಟುಂಬಗಳೊಂದಿಗೆ 2016-18ರಲ್ಲಿ ಖೋರಾಸಾನ್ ಪ್ರಾಂತ್ಯದ (ಐಎಸ್‌ಕೆಪಿ) ಇಸ್ಲಾಮಿಕ್ ಸ್ಟೇಟ್ ಭೂಪ್ರದೇಶದಲ್ಲಿ ವಾಸಿಸಲು ಅಫ್ಘಾನಿಸ್ತಾನಕ್ಕೆ ಹೋಗಿದ್ದರು. ಅವರ ಗಂಡಂದಿರು ದಾಳಿಯೊಂದರಲ್ಲಿ ಕೊಲ್ಲಲ್ಪಟ್ಟಿದ್ದು ಈ ಮಹಿಳೆಯರು 2019 ರ ನವೆಂಬರ್‌ನಲ್ಲಿ ಅಫ್ಘಾನ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ವಿದೇಶಾಂಗ ಸಚಿವಾಲಯ ಮತ್ತು ಗುಪ್ತಚರ ಸಂಸ್ಥೆಗಳ ಹಿರಿಯ ಭಾರತೀಯ ಅಧಿಕಾರಿಗಳು ಕಾಬೂಲ್ ಕಾರಾಗೃಹಗಳಲ್ಲಿ ಈ ನಾಲ್ವರು ಮಹಿಳೆಯರನ್ನು ವಿಚಾರಣೆ ನಡೆಸಿದ್ದರು. ಆದರೆ, ಈ ಮಹಿಳೆಯರು ಇಸ್ಲಾಮಿಕ್ ತೀವ್ರವಾದಿಗಳಾಗಿ ಮಾರ್ಪಟ್ಟಿದ್ದು ಮರಳಿ ದೇಶ ಪ್ರವೇಶಿಸಲು ಭಾರತ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂಬ ವರದಿಗಳ ಬಗ್ಗೆ ಈಗಾಗಲೇ ನಿಮಿಷಾ ತಾಯಿ ಬಿಂದು ಅಸಮಾಧಾನ ಹೊರಹಾಕಿದ್ದಾರೆ.
ತಿರುವನಂತಪುರಂನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬಿಂದು, "ಅವರು ನನ್ನ ಮಗಳನ್ನು ಮರಳಿ ದೇಶಕ್ಕೆ ಬರಲು ಏಕೆ ಅನುಮತಿಸುತ್ತಿಲ್ಲ. ಅವಳನ್ನು ವಿಚಾರಣೆಗೆ ಒಳಪಡಿಸಿ ಮತ್ತು ಭೂಮಿಯ ಕಾನೂನಿನ ಪ್ರಕಾರ ಶಿಕ್ಷೆಯನ್ನು ನೀಡಲಿ. ಆಕೆಗೆ ಸಣ್ಣ ಮಗು ಇದೆ" ಎಂದು ಗೋಗರೆದಿದ್ದಾರೆ.
ಹಲವಾರು ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರಿಗೆ ಮುಸ್ಲಿಂ ಯುವಕರು ಆಮಿಷವೊಡ್ಡಿ, ಐಎಸ್ ಭದ್ರಕೋಟೆಗಳಿಗೆ ಕರೆದೊಯ್ದು, ಭಯೋತ್ಪಾದಕ ತರಬೇತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
2009 ರಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಮತಾಂತರಗೊಳಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ಮುಸ್ಲಿಂ ಯುವಕನ ಜಾಮೀನು ಅರ್ಜಿಯನ್ನು ಆಲಿಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಕೆ.ಟಿ.ಶಂಕರನ್ ಅವರು ಹೀಗೆ ಹೇಳಿದ್ದರು- "ಪ್ರೀತಿಯ ವಸ್ತ್ರದ ಅಡಿಯಲ್ಲಿ ಬಲವಂತದ ಧಾರ್ಮಿಕ ಮತಾಂತರದ ಸೂಚನೆಗಳು" ಕಂಡುಬಂದಿವೆ. ಅಂತಹ ಕೃತ್ಯಗಳನ್ನು ತಡೆಗಟ್ಟಲು ಶಾಸಕಾಂಗದ ಹಸ್ತಕ್ಷೇಪಕ್ಕೆ ಕರೆ ನೀಡಿದರು.
ಹೊಸ ಬೆಳವಣಿಗೆಗಳ ಬಗ್ಗೆ ಪ್ರಮುಖ ಚರ್ಚೆಗೆ 'ಲವ್ ಜಿಹಾದ್' ವಿಷಯವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಆರ್ಎಸ್ಎಸ್ ಮತ್ತು ಇತರ ಹಿಂದೂ ಸಂಘಟನೆಗಳು ಈಗಾಗಲೇ ಒತ್ತಾಯಿಸಿವೆ.
ಸಮುದಾಯದ ಹಲವಾರು ಹುಡುಗಿಯರನ್ನು ಮುಸ್ಲಿಂ ಯುವಕರು ಮದುವೆ ಮತ್ತು ಮತಾಂತರಕ್ಕೆ ಆಮಿಷವೊಡ್ಡುತ್ತಿದ್ದಾರೆ ಎಂದು ಕ್ಯಾಥೊಲಿಕ್ ಚರ್ಚ್ ಆರೋಪಿಸಿದೆ. ಕಾರ್ಡಿನಲ್ ಜಾರ್ಜ್ ಅಲಂಚೆರಿ ಅವರ ಅಧ್ಯಕ್ಷತೆಯಲ್ಲಿರುವ ಕ್ಯಾಥೊಲಿಕ್ ಬಿಷಪ್‌ಗಳ ಉನ್ನತ ಸಂಸ್ಥೆಯಾದ ಸಿರೋ-ಮಲಬಾರ್ ಚರ್ಚ್‌ನ ಸಿನೊಡ್, ಕೇರಳ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ನೋಡುತ್ತಿಲ್ಲ ಎಂದು ಆರೋಪಿಸಿದ್ದರು.
ಕೇರಳದಲ್ಲಿ ಕ್ರಿಶ್ಚಿಯನ್ ಹುಡುಗಿಯರನ್ನು ಗುರಿಯಾಗಿಸಿಕೊಂಡು 'ಲವ್ ಜಿಹಾದ್' ನಡೆಯುತ್ತಿದೆ ಎಂಬುದು ವಾಸ್ತವ ಸತ್ಯ. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ನೇಮಕಗೊಂಡ 21 ಹುಡುಗಿಯರಲ್ಲಿ ಅರ್ಧದಷ್ಟು ಕ್ರೈಸ್ತರು ಎಂದು ಅದು ಹೇಳಿದೆ.
ಆದರೆ, ಮುಸ್ಲಿಂ ಸಂಘಟನೆಗಳು 'ಲವ್ ಜಿಹಾದ್' ಅಸ್ತಿತ್ವವನ್ನು ನಿರಾಕರಿಸಿವೆ. ಆಮೂಲಾಗ್ರ ಮುಸ್ಲಿಂ ಗುಂಪು ಎಂದು ಪರಿಗಣಿಸಲ್ಪಟ್ಟ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಭಾರತದ ಯಾವುದೇ ಮುಸ್ಲಿಂ ಸಂಘಟನೆಗಳು ಇಸ್ಲಾಮಿಕ್ ಸ್ಟೇಟ್ ಅನ್ನು ಗುರುತಿಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿವೆ.
ಸಂಘಟನೆಯ ಕೇರಳ ರಾಜ್ಯ ಅಧ್ಯಕ್ಷ ನಸರುದ್ದೀನ್ ಎಲಾರಾಮ್, "ಲವ್ ಜಿಹಾದ್" ನಂತಹ ಯಾವುದೇ ವಿಷಯಗಳಿಲ್ಲ ಮತ್ತು ದೇಶದ ಯಾವುದೇ ಮುಸ್ಲಿಂ ಸಂಘಟನೆಯು ಇಸ್ಲಾಮಿಕ್ ಸ್ಟೇಟ್ ಅಸ್ತಿತ್ವವನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.