ರಾಮಗಢ(ಜಾರ್ಖಂಡ್): ರಾಂಚಿಯ ರೂಪದರ್ಶಿಯೊಬ್ಬರು ಲವ್ ಜಿಹಾದ್ ಆರೋಪ ಮಾಡಿದ ಬೆನ್ನಲ್ಲೇ, ಯುವತಿಯ ಕತ್ತಿನ ಮೇಲೆ ಚಾಕು ಇಟ್ಟು ಬೆದರಿಸಿದ ಪ್ರಕರಣ ದಾಖಲಾಗಿದೆ. ಕೊಲೆ ಆರೋಪದಲ್ಲಿ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ ಯುವಕನೊಬ್ಬ 'ತನ್ನನ್ನು ಪ್ರೀತಿಸು ಎಂದು ಹುಡುಗಿಯೊಬ್ಬಳ ಕುತ್ತಿಗೆಗೆ ಹರಿತವಾದ ಶಸ್ತ್ರಾಸ್ತ್ರ ಹಿಡಿದು ಬೆದರಿಸಿದ್ದಾನೆ. ಆರೋಪಿ ಈಗ ಅಂದರ್ ಆಗಿದ್ದಾನೆ.
ಅರ್ಜು ಮನ್ಸೂರಿ ಬಂಧಿತ ವ್ಯಕ್ತಿ. ಪ್ರಕರಣ ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 31ರಂದು ತಡರಾತ್ರಿ ನಡೆದಿದೆ. ಬೆದರಿಕೆ ಹಾಗೂ ಮತಾಂತರ ಪ್ರಯತ್ನದ ಪ್ರಕರಣವೊಂದರಲ್ಲಿ ಜೈಲುಪಾಲಾಗಿದ್ದ ಅರ್ಜು ಮನ್ಸೂರಿ ಈಚೆಗಷ್ಟೇ ಹೊರಬಂದಿದ್ದ. ಬಳಿಕ ರಾಮಗಢದ ಯುವತಿಯೊಬ್ಬಳ ಹಿಂದೆ ಬಿದ್ದು ಪೀಡಿಸುತ್ತಿದ್ದ. ಮೇ 31 ರ ತಡರಾತ್ರಿ ಬಾಲಕಿಯ ಮನೆಗೆ ನುಗ್ಗಿ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಇದನ್ನು ಆಕೆ ಪ್ರತಿಭಟಿಸಿದಾಗ ಹರಿತವಾದ ವಸ್ತುವನ್ನು ಕತ್ತಿನ ಮೇಲಿಟ್ಟು ತನ್ನ ಸ್ನೇಹ ಬೆಳೆಸುವಂತೆ ಒತ್ತಾಯಿಸಿದ್ದಾನೆ. ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಭಯದಿಂದ ಯುವತಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಮನೆಯಿಂದ ಓಡಿಹೋಗಿದ್ದಾಳೆ. ಸಹಾಯಕ್ಕಾಗಿ ಮೊರೆಯಿಟ್ಟಿದ್ದಾಳೆ. ಇಷ್ಟಾದರೂ ಬಿಡದ ಆರೋಪಿ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಅಷ್ಟರಲ್ಲಿ ಜನರು ಓಡಿಬಂದು ಬಾಲಕಿಯನ್ನು ರಕ್ಷಿಸಿ, ಅರ್ಜು ಮನ್ಸೂರಿಯನ್ನು ಹಿಡಿದಿದ್ದಾರೆ. ವಿಷಯ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಳಿಕ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಅರ್ಜು ಮನ್ಸೂರಿ ತನ್ನನ್ನು ಹಿಂಬಾಲಿಸುತ್ತಿದ್ದ. ತನ್ನೊಂದಿಗೆ ಸ್ನೇಹಕ್ಕಾಗಿ ತನ್ನ ಮೇಲೆ ಒತ್ತಡ ಹೇರುತ್ತಿದ್ದ. ಇದನ್ನು ವಿರೋಧಿಸಿದ್ದಕ್ಕೆ ಆತ, ಮೇ 31 ರಂದು ರಾತ್ರಿ ಮನೆಗೆ ನುಗ್ಗಿ ಹಲ್ಲೆ ಮಾಡಿದ. ಇದಲ್ಲದೇ, ಇನ್ನೂ 8 ಜನ ಅಪರಿಚಿತರು ಒಳಪ್ರವೇಶಿಸಿ ನನ್ನ ಜತೆ ಜಗಳವಾಡಿದರು. ನನ್ನ ಸ್ನೇಹ ಮಾಡು ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಕತ್ತು ಹಿಸುಕಲು ಯತ್ನಿಸಿದರು. ಅಲ್ಲದೇ, ಚಾಕುವಿನಿಂದ ಹೆದರಿಸಿದರು ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.
ಜನವರಿ 14 ರಂದು ಅರ್ಜು ಮನ್ಸೂರಿಯ ಸಹೋದರ ಅರ್ಮಾನ್ ಖಾನ್ ಎಂಬುವವನು ಮಹಿಳೆಯನ್ನು ಕೊಂದ ಘಟನೆಯಲ್ಲಿ ಬಂಧಿತನಾಗಿದ್ದ. ಇದಾದ ಬಳಿಕ ಮೃತ ಮಹಿಳೆಯ ಅಕ್ಕನನ್ನೂ ಕೊಲೆ ಮಾಡುವುದಾಗಿ ಅರ್ಜು ಮನ್ಸೂರಿ ಬೆದರಿಕೆ ಹಾಕಿದ್ದ. ಪ್ರಕರಣದಲ್ಲಿ ಈತನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ನಂತರ ಅರ್ಜುನ್ ಮತ್ತೆ ತನ್ನ ಕುಕೃತ್ಯಗಳನ್ನು ಮುಂದುವರಿಸಿದ್ದ. ಘಟನೆಯ ಬಗ್ಗೆ ಬಿಜೆಪಿ ಕಿಡಿಕಾರಿದ್ದು, ಸರ್ಕಾರ ಲವ್ ಜಿಹಾದ್ ತಡೆಯಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದೆ.
ರೂಪದರ್ಶಿ ಲವ್ ಜಿಹಾದ್ ಆರೋಪ: ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಮಾಡಿ ಬಲವಂತವಾಗಿ ಮತಂತಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ ರಾಂಚಿಯ ರೂಪದರ್ಶಿಯೊಬ್ಬರು 2 ದಿನಗಳ ಹಿಂದಷ್ಟೇ ದೂರು ನೀಡಿದ್ದರು. ಕೇರಳದಲ್ಲಿ ಹಿಂದು ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಐಸಿಸಿ ಉಗ್ರರ ಸಂಘಟನೆಗೆ ಸೇರಿಸುವ ಕಥಾಹಂದರ ಹೊಂದಿರುವ ದಿ ಕೇರಳ ಸ್ಟೋರಿಯನ್ನು ನೋಡಿದ ಬಳಿಕ ಧೈರ್ಯ ಬಂದಿದ್ದು, ಕೇಸ್ ದಾಖಲಿಸಿದ್ದಾಗಿ ಯುವತಿ ಹೇಳಿಕೊಂಡಿದ್ದರು.
ಇದನ್ನೂ ಓದಿ: 'ಲವ್ ಜಿಹಾದ್ನಲ್ಲಿ ಸಿಲುಕಿದ್ದೇನೆ, ನನ್ನನ್ನು ರಕ್ಷಿಸಿ': ಪಿಎಂ ಮೋದಿಗೆ ಮನವಿ ಮಾಡಿದ ಮಾಡೆಲ್