ಕತಿಹಾರ್ (ಬಿಹಾರ) : ಹಿಂದು ಹುಡುಗಿಯನ್ನು ಅನ್ಯ ಧರ್ಮದ ಹುಡುಗ ತಾನು ಹಿಂದೂ ಎಂದು ಬಿಂಬಿಸಿ ಮದುವೆಯಾಗಿದ್ದು, ನಂತರ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿರುವ ಬಗ್ಗೆ ಸಂತ್ರಸ್ತ ಮಹಿಳೆ ಕತಿಹಾರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಮನವಿ ಮಾಡಿದ್ದಾರೆ.
ಮಣಿಹಾರಿ ಮೂಲದ 29 ವರ್ಷದ ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಗೆ ಫೇಸ್‌ಬುಕ್ ಮೂಲಕ ದುಬೈನಲ್ಲಿ ನೆಲೆಸಿರುವ ಯುವಕ ಪರಿಚಯವಾಗಿದ್ದ. ಆತ ತನ್ನ ಹೆಸರನ್ನು ರಾಜ್ ಎಂದು ಹೇಳಿಕೊಂಡಿದ್ದ. ಸ್ನೇಹದಿಂದ ಶುರುವಾದ ಸಂಬಂಧ ಪ್ರೇಮಕ್ಕೆ ತಿರುಗಿದ್ದು, 2017 ರಲ್ಲಿ ವಿವಾಹವಾಗಿದ್ದರು. ಕೆಲ ದಿನಗಳ ನಂತರ ಆತನ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದರು. ಮೊದಲಿಗೆ ಆತ ಒಪ್ಪಲಿಲ್ಲವಾದರೂ, ಪ್ರೇಯಸಿಯ ಒತ್ತಡಕ್ಕೆ ಮನೆಗೆ ಕರೆದುಕೊಂಡು ಹೋಗಿದ್ದ.
ಆ ಬಳಿಕವೇ ಈ ಮಹಿಳೆಗೆ ತಾನು ಅನ್ಯ ಧರ್ಮೀಯನನ್ನು ಮದುವೆ ಆಗಿದ್ದೇನೆ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲ ತಾನು ಮುದವೆ ಆಗಿರುವವನ ಹೆಸರು ತೌಕಿರ್ ಅಲಂ ಎಂಬುದು ಗೊತ್ತಾಗಿದೆ. ಆ ಬಳಿಕವೂ ಮಹಿಳೆ ಆತನ ಮನೆಯಲ್ಲೇ ಅತ್ತೆಯೊಂದಿಗೆ ವಾಸಿಸಲು ಆರಂಭಿಸಿದ್ದಳು. ಒಂದು ಮಗು ಕೂಡ ಜನಿಸಿದೆ. ಎಲ್ಲವೂ ಸರಿ ಇದೆ ಎಂದುಕೊಳ್ಳುತ್ತಿರುವಾಗಲೇ ಧರ್ಮವನ್ನು ಬದಲಾಯಿಸುವಂತೆ ಪತಿ ಮತ್ತು ಆಕೆಯ ಅತ್ತೆ ಒತ್ತಡ ಹೇರಲು ಶುರು ಮಾಡಿದ್ದಾರೆ.
ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ಮಹಿಳೆ ಕತಿಹಾರ್ ನ್ಯಾಯಾಲಯ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ಪ್ರಕರಣದ ತನಿಖೆಗೆ ಎಸ್ಪಿ ಇಲಾಖೆಗೆ ಸೂಚನೆ ನೀಡಿದ್ದು,, ಶೀಘ್ರದಲ್ಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೀಗೊಂದು ಲವ್ ಜಿಹಾದ್: ಸಿಖ್ ಎಂದು ಸುಳ್ಳು ಹೇಳಿ ಮದುವೆಯಾದ ಭೂಪ