ಮುಂಬೈ(ಮಹಾರಾಷ್ಟ್ರ): ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ವಿವಾದ ಮುಂದುವರೆದಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಈ ಕುರಿತಂತೆ ಮತ್ತೊಮ್ಮೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದು, 'ಧರ್ಮವು ಕಾನೂನಿಗಿಂತ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು' ಎಂದಿದ್ದಾರೆ. ಇದೇ ವೇಳೆ, 'ಮಹಾರಾಷ್ಟ್ರದಲ್ಲಿ ಯಾವುದೇ ಗಲಭೆಗಳನ್ನು ನಾವು ಬಯಸುವುದಿಲ್ಲ, ಮೇ 3ರ ನಂತರ ಮುಂದಿನ ನಡೆಯೇನು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ' ಎಂದು ಹೇಳಿದರು.
ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ರಾಜ್ ಠಾಕ್ರೆ, 'ನಮಗೆ ಮಹಾರಾಷ್ಟ್ರದಲ್ಲಿ ಗಲಭೆಗಳು ಬೇಕಾಗಿಲ್ಲ. ಪ್ರಾರ್ಥನೆ ಸಲ್ಲಿಸುವುದನ್ನು ಯಾರೂ ವಿರೋಧಿಸಿಲ್ಲ. ಆದರೆ ಪ್ರಾರ್ಥನೆಯ ವೇಳೆ ಧ್ವನಿವರ್ಧಕ ಬಳಸಿದರೆ, ನಾವೂ ಕೂಡಾ ಅದಕ್ಕೆ ಪ್ರತಿಯಾಗಿ ಧ್ವನಿವರ್ಧಕ ಬಳಸುತ್ತೇವೆ' ಎಂದು ಎಚ್ಚರಿಕೆ ಕೊಟ್ಟರು.
'ಇಂತಹ ವಿಷಯಗಳಿಗೆ ಇದೇ ರೀತಿಯಲ್ಲಿ ಉತ್ತರಿಸಬೇಕು ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ಮುಸ್ಲಿಮರಿಗೆ ಅರ್ಥವಾಗುವುದಿಲ್ಲ' ಎಂದ ರಾಜ್ ಠಾಕ್ರೆ, ಇತ್ತೀಚೆಗಷ್ಟೇ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಯಲು ಸರ್ಕಾರಕ್ಕೆ ಗಡುವು ನೀಡಿದ್ದರು. ಮೇ 3ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂದಿದ್ದ ಅವರು, ಒಂದು ವೇಳೆ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ, ಮಸೀದಿಯ ಹೊರಗೆ ಹನುಮಾನ್ ಚಾಲೀಸಾ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿವಾದ ಗಂಭೀರ ಸ್ವರೂಪ ಪಡೆದುಕೊಂಡಿದೆ.
'ಹೊಸ ಹಿಂದೂ ಓವೈಸಿ': ರಾಜ್ ಠಾಕ್ರೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಶಿವಸೇನಾ ಸಂಸದ ಸಂಜಯ್ ರಾವತ್ ಅವರು ರಾಜ್ ಠಾಕ್ರೆ ಅವರನ್ನು 'ಹೊಸ ಹಿಂದೂ ಓವೈಸಿ' ಎಂದೂ, ಎಂಎನ್‌ಎಸ್ ಪಕ್ಷವನ್ನು 'ಹೊಸ ಹಿಂದುತ್ವ ಎಂಐಎಂ' ಎಂದೂ ವ್ಯಂಗ್ಯವಾಡಿದ್ದರು. ಮುಂಬೈನ ಮಾಜಿ ಮೇಯರ್ ಕಿಶೋರಿ ಪೆಡ್ನೇಕರ್ ಕೂಡಾ ರಾಜ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿ, ಇವೆಲ್ಲಾ ಹೇಳಿಕೆಗಳು ಚುನಾವಣೆವರೆಗೆ ಮಾತ್ರ ಇರುತ್ತವೆ. ಈಗಾಗಲೇ ಹಲವು ಸಮಸ್ಯೆಗಳಿದ್ದ, ಧಾರ್ಮಿಕ ವಿಚಾರವನ್ನು ಸಮಸ್ಯೆಯನ್ನಾಗಿಸಿ, ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ರಾಜ್ ಠಾಕ್ರೆ ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಸಮಾಜಘಾತುಕ ಶಕ್ತಿಗಳ ಮಟ್ಟಹಾಕಲು ದೆಹಲಿ ಪೊಲೀಸರಿಂದ ಡ್ರೋನ್ ಕಣ್ಗಾವಲು- ವಿಡಿಯೋ