ನವದೆಹಲಿ: ನಂದಿಗ್ರಾಮದ ಬಿಜೆಪಿ ಅಭ್ಯರ್ಥಿಯು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಸೋಲಿಸಲಿದ್ದಾರೆ ಮತ್ತು ಮುಂಬರುವ ರಾಜ್ಯ ವಿಧಾನಸಭೆಯಲ್ಲಿ ಪಶ್ಚಿಮ ಬಂಗಾಳದ ಪ್ರತಿ ಮೂಲೆ -ಮೂಲೆಯಲ್ಲೂ ಕಮಲ ಅರಳಲಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆಯ ಹಿಂದೆ 'ಬಿಜೆಪಿ ಪಿತೂರಿ' ಇದೆ ಎಂಬ ಟಿಎಂಸಿ ಆರೋಪಕ್ಕೆ ಪ್ರತಿಕ್ರಿಯಿಸಿದ ಠಾಕೂರ್, ಮಮತಾ ಬ್ಯಾನರ್ಜಿ ತಮಗೆ ಸನ್ನಿಹಿತವಾಗುತ್ತಿರುವ ಸೋಲಿಗೆ ಹೆದರುತ್ತಿರುವುದು ಸಹಜ ಮತ್ತು ಎಲ್ಲಾ ನಾಯಕರು ಒಬ್ಬರ ಮೇಲೋಬ್ಬರು ಪಕ್ಷ ತ್ಯಜಿಸುತ್ತಿರುವುದರಿಂದ ಟಿಎಂಸಿ ಸೋಲಿಗೆ ಹೆದರುತ್ತಿರುವುದು ಸಹಜ ಎಂದಿದ್ದಾರೆ.
ಭಾರತದ ಪ್ರಜಾಪ್ರಭುತ್ವದ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುವ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಕುರಿತು ಮಾತನಾಡಿದ ಅನುರಾಗ್ ಠಾಕೂರ್, ದೇಶದ ಜನರು ವರ್ಷಗಳ ಕಾಲ ಆಡಳಿತ ನಡೆಸಲು ಅವಕಾಶ ನೀಡಿದ ಪಕ್ಷವು ಪ್ರಜಾಪ್ರಭುತ್ವವನ್ನು ಪ್ರಶ್ನಿಸುತ್ತಿದೆ. ಏಕೆಂದರೆ ಅವರ ಸ್ವಂತ ವಿಶ್ವಾಸಾರ್ಹತೆ ಕೊನೆಗೊಳ್ಳುತ್ತಿದೆ. ರಾಹುಲ್ ಗಾಂಧಿ ಉತ್ತರ ಭಾರತೀಯರನ್ನು ಮೂರ್ಖರು ಎಂದು ಕರೆಯುತ್ತಾರೆ. ಕಾಂಗ್ರೆಸ್ ಅಳಿವಿನ ಅಂಚಿನಲ್ಲಿರುವುದಕ್ಕೆ ಇದೇ ಕಾರಣ ಎಂದ್ರು.