ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಮೂರು ಕ್ಷೇತ್ರಗಳಲ್ಲಿ ಪ್ರಬಲ ಹೋರಾಟ ನಡೆಸಿದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಮತ್ತೊಮ್ಮೆ ನಿರಾಸೆಗೊಳಗಾಗಿದೆ.
2016ರ ವಿಧಾನಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ, ಈ ಸಲ ಮತ್ತಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಿದೆ ವಿಶ್ವಾಸ ಇಟ್ಟುಕೊಂಡಿತ್ತು. ಆದರೆ ಯಾವುದೇ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ದೇವರ ನಾಡಲ್ಲಿ ಬಿಜೆಪಿ ಅರಳುವ ಕನಸು ಮತ್ತೊಮ್ಮೆ ಮರೀಚಿಕೆಯಾಗಿದೆ.
ಎಡ ಪಕ್ಷಗಳಾದ ಯುಡಿಎಫ್ ಹಾಗೂ ಎಲ್ಡಿಎಫ್ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. ವಿಶೇಷವೆಂದರೆ ಈ ಸಲ ಕೇರಳದಲ್ಲಿ ಕಮಲ ಅರಳಿಸುವ ಉದ್ದೇಶದಿಂದಲೇ ಮೆಟ್ರೋ ಮ್ಯಾನ್ ಖ್ಯಾತಿಯ ಇ. ಶ್ರೀಧರನ್ ಅವರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಅವರು ಸ್ಪರ್ಧಿಸಿ ಪಲಕ್ಕಾಡ್ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಜತೆಗೆ ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋತು ನಿರಾಸೆ ಮೂಡಿಸಿದ್ದಾರೆ.
ಇದನ್ನೂ ಓದಿ: ನಂದಿಗ್ರಾಮದಲ್ಲಿ ಶಿಷ್ಯನೆದುರು ಸೋಲುಂಡ ಮಮತಾ.. ಸುವೇಂದು ಅಧಿಕಾರಿಗೆ ಜಯ
2016ರ ವಿಧಾನಸಭೆ ಚುನಾವಣೆ ವೇಳೆ ಕೇಂದ್ರದ ಮಾಜಿ ಸಚಿವ ಒ. ರಾಜಗೋಪಾಲ್ ತಿರುವನಂತಪುರಂ ಜಿಲ್ಲೆಯ ನೊಮೊಮ್ ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಈ ಬಾರಿ ಬಿಜೆಪಿಯ ಯಾವುದೇ ಅಭ್ಯರ್ಥಿ ಗೆಲುವು ಕಂಡಿಲ್ಲ. 140 ಕ್ಷೇತ್ರಗಳ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಲ್ಡಿಎಫ್+ 97, ಯುಡಿಎಫ್+ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಭಾರತೀಯ ಜನತಾ ಪಾರ್ಟಿ ಯಾವುದೇ ಕ್ಷೇತ್ರದಲ್ಲೂ ಜಯ ಸಾಧಿಸಿಲ್ಲ.