ಬಲ್ಲಭಗಢ( ಹರಿಯಾಣ): ಜಿಲ್ಲೆಯಲ್ಲಿ ಆಶ್ಚರ್ಯಕರವಾದ ಸಂಗತಿಯೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ತಾನು ಮದುವೆಯಾಗಿ ಒಂದು ವರ್ಷದ ಬಳಿಕ ತನ್ನ ಧರ್ಮಪತ್ನಿಯ ಅಸಲಿಯತ್ತಿನ ಬಗ್ಗೆ ತಿಳಿದಿದೆ. ಅಷ್ಟೇ ಅಲ್ಲ ಆತ ತನ್ನ ಹೆಂಡ್ತಿಗೆ ಏಳನೇ ಗಂಡನಾಗಿರುವುದು ವರ್ಷದ ಬಳಿಕ ತಿಳಿದಿದೆ.
ನಡೆದಿದ್ದೇನು?: ಬಲ್ಲಭಗಢದ ನಿವಾಸಿ ಅಜಯ್ ಕುಮಾರ್ ಅವರ ಕಥೆ ಆಶ್ಚರ್ಯಕರವಾಗಿದೆ. 31 ವರ್ಷದ ಅಜಯ್ಕುಮಾರ ಏಪ್ರಿಲ್ 2020 ರಲ್ಲಿ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ದೆಹಲಿಯ ವಿನೋದ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಾಜಲ್ ಗುಪ್ತಾ ಎಂಬ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಾರೆ. ಆ ವೇಳೆ, ಕೊರೊನಾ ಲಾಕ್‌ಡೌನ್ ಇದ್ದ ಕಾರಣ ಸುಮಾರು 4 ತಿಂಗಳ ಕಾಲ ಇಬ್ಬರ ನಡುವೆ ಆನ್‌ಲೈನ್ ಸಂಭಾಷಣೆ ನಡೆದಿದೆ. ಈ ವೇಳೆ, ಕಾಜಲ್ ಗುಪ್ತಾ ಪ್ರೀತಿಯ ಬಲೆಗೆ ಅಜಯ್ ಕುಮಾರ್ ಬಿದ್ದಿದ್ದಾನೆ.
ಮದುವೆ: 25 ಜುಲೈ 2020 ರಿಂದ ಇಬ್ಬರು ಪರಸ್ಪರ ಭೇಟಿಯಾಗಿ ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅದರಂತೆ ಇಬ್ಬರೂ 7 ಆಗಸ್ಟ್ 2020 ರಂದು ಪ್ರೇಮ ವಿವಾಹ ಮಾಡಿಕೊಂಡಿದ್ದಾರೆ ಇದರ ನಂತರ ದಂಪತಿ ದೆಹಲಿಯಲ್ಲಿ ಮತ್ತು ಕೆಲವೊಮ್ಮೆ ಬಲ್ಲಭಗಢದಲ್ಲಿ ವಾಸಿಸಲು ಪ್ರಾರಂಭಿಸಿದರು.
ಪತ್ನಿಯ ಬೇಡಿಕೆ ಪೂರೈಸಿದ ಗಂಡ: ಮದುವೆ ಬಳಿಕ ಅಜಯ ತನ್ನ ಹೆಂಡತಿಯ ಪ್ರತಿಯೊಂದು ಆಸೆಯನ್ನು ಪೂರೈಸುತ್ತಿದ್ದನು. ದೆಹಲಿಯ ಲಕ್ಷ್ಮಿ ನಗರದಲ್ಲಿ ಬಾಡಿಗೆ ಮನೆ ತೆಗೆದುಕೊಳ್ಳುವುದರಿಂದ ಹಿಡಿದು ಮನೆಗೆ ಬೇಕಾದ ಎಲ್ಲ ಪೀಠೋಪಕರಣಗಳು ಮತ್ತು ಬಟ್ಟೆ, ಆಭರಣ ಇತ್ಯಾದಿಗಳನ್ನು ಖರೀದಿಸುವವರೆಗೆ ಹೆಂಡ್ತಿಯ ಆಸೆಯಂತೆ ನಡೆದುಕೊಂಡಿದ್ದನು.
ಬ್ಯೂಟಿ ಪಾರ್ಲರ್: ಇನ್ನು ಕಾಜಲ್ ಕೂಡ ಬ್ಯೂಟಿ ಪಾರ್ಲರ್ ತೆರೆಯುವಂತೆ ಒತ್ತಾಯಿಸಿ ಅಜಯ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಜಯ್ ತನ್ನ ಹೆಂಡ್ತಿ ಇಚ್ಛೆಯಂತೆ ಕಾಜಲ್ ಮೇಲೆ ತನ್ನ ಎಲ್ಲ ಬಂಡವಾಳವನ್ನು ಹೂಡಿಕೆ ಮಅಡಿದ್ದ. ಅಷ್ಟೇ ಅಲ್ಲ ಬ್ಯಾಂಕಿನಿಂದ ಸಾಲವನ್ನೂ ಪಡೆದು ಕಾಜಲ್ಗೆ ಕೊಟ್ಟಿದ್ದನು.
ಓದಿ: ಲವ್ ಮ್ಯಾರೇಜ್ ಆದ ಮಗಳು.. ವರ್ಷದ ಬಳಿಕ ಅಳಿಯನ ಗುಂಡಿಕ್ಕಿ ಕೊಂದ ಮಾವ!
ಹಣ ಲಪಾಟಾಯಿಸಿ ಪರಾರಿ: ಮದುವೆಯಾದ ಒಂದು ವರ್ಷದ ನಂತರ ಅಂದ್ರೆ 11 ಆಗಸ್ಟ್ 2021 ರಂದು, ಕಾಜಲ್ ಮನೆಯ ಎಲ್ಲಾ ಸಾಮಗ್ರಿಗಳೊಂದಿಗೆ ಪರಾರಿಯಾಗಿದ್ದಳು. ಆದರೆ ಅಜಯ್ ನನ್ನ ಹೆಂಡ್ತಿ ನಾಪತ್ತೆಯಾಗಿದ್ದಾಳೆ ಎಂಬ ಭ್ರಮೆಯಲ್ಲಿದ್ದ. ಆಮೇಲೆ ಅಜಯ್ ತನ್ನ ಮಟ್ಟದಲ್ಲಿ ಕಾಜಲ್ ಬಗ್ಗೆ ತನಿಖೆ ಆರಂಭಿಸಿದಾಗ ಸತ್ಯಾಂಶ ಗೊತ್ತಾಗಿದೆ.
7ನೇ ಗಂಡ: ಕಾಜಲ್ ಒಂದು ದರೋಡೆ ಗುಂಪಿನ ಸದಸ್ಯೆಯಾಗಿರುವ ಸತ್ಯಾಂಶ ಅಜಯ್ಗೆ ತಿಳಿದಿದೆ. ಕಾಜಲ್ ಶ್ರೀಮಂತ ಹುಡುಗರನ್ನು ತನ್ನ ಬಲೆಗೆ ಕೆಡವಿ ಮದುವೆ ಮಾಡಿಕೊಳ್ಳುತ್ತಿದ್ದಳು. ಬಳಿಕ ಅವರ ಮನೆಯನ್ನು ಸಂಪೂರ್ಣ ದರೋಡೆ ಮಾಡುತ್ತಿದ್ದಳು. ಆಕೆಗೆ ಅಜಯ್ 7ನೇ ಗಂಡ ಎಂಬುದು ಗೊತ್ತಾಗಿದೆ. ಕೂಡಲೇ ಅಜಯ್ ದೆಹಲಿಯಿಂದ ಹರಿಯಾಣ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ಆದರೆ ಹರಿಯಾಣದ ಪೊಲೀಸರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಅಜಯ್ ಆರೋಪಿಸಿದ್ದಾರೆ.
ಡಿಟೆಕ್ಟಿವ್ ಅಜಯ್ ಕುಮಾರ್: ಈಗಾಗಲೇ ಅಜಯ್ ಕುಮಾರ್ ಮಾಡಿರುವ ಸಾಲಕ್ಕಾಗಿ ಮರುಪಾವತಿ ಮಾಡುವಂತೆ ಬ್ಯಾಂಕ್‌ಗಳು ನೋಟಿಸ್ ಕಳುಹಿಸುತ್ತಿವೆ. ಗಣಿತ ಶಿಕ್ಷಕರಾಗಿರುವ ಅಜಯ್ ಕುಮಾರ್ ಖಾಸಗಿ ಪತ್ತೇದಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಮಟ್ಟದಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಹನಿಟ್ರ್ಯಾಪ್: ಆರೋಪಿ ಹುಡುಗಿ ಸೋಷಿಯಲ್ ಮೀಡಿಯಾ ಮತ್ತು ಆ್ಯಪ್ವೊಂದರ ಮೂಲಕ ಹುಡುಗರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸುತ್ತಾಳೆ. ಬಳಿಕ ಹಣಕ್ಕಾಗಿ ಬೇಡಿಕೆಯಿಟ್ಟು ಅಥವಾ ಮನೆಗೆ ಹೋಗಿ ದರೋಡೆ ಮಾಡತ್ತಾಳೆ. ಕಾಜಲ್ ಈ ಹಿಂದೆಯೂ ಅನೇಕ ಮದುವೆಗಳನ್ನು ಸಹ ಮಾಡಿಕೊಂಡಿದ್ದಾಳೆ. ಇದರ ಸಾಕ್ಷ್ಯವನ್ನು ಪೊಲೀಸರಿಗೆ ನೀಡಲಾಗಿದ್ದು, ಸುಮಾರು 10 ತಿಂಗಳು ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಜಯ್ ಕುಮಾರ್ ಆರೋಪಿಸಿದ್ದಾರೆ.
2021 ಜೂನ್ 26 ರಂದು ಪೊಲೀಸರು ಬಲ್ಲಭಗಢದಲ್ಲಿ ಪ್ರಕರಣ ದಾಖಲಿಸಿದ್ದಾರೆ. ನನ್ನ ಕಡೆಯಿಂದ 13 ಆರೋಪಿಗಳ ಹೆಸರು ಮತ್ತು ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿದೆ. ಆದರೆ, ಎಫ್‌ಐಆರ್ ದಾಖಲಾದ ನಂತರವೂ ಪೊಲೀಸರಿಗೆ ಇದುವರೆಗೆ ಏನೂ ಮಾಡಲು ಸಾಧ್ಯವಾಗಿಲ್ಲ.
ಆರೋಪಿಗಳಿಂದ ತನಗೆ ಜೀವ ಬೆದರಿಕೆ ಹಾಕಲಾಗಿದ್ದು, ಜಾತಿ ನಿಂದನೆ ಕೂಡ ಮಾಡಲಾಗಿತ್ತು ಎಂಬುದು ಅಜಯ್ ಕುಮಾರ್ ಆರೋಪವಾಗಿದೆ. ತಮ್ಮ ಲೂಟಿ ಮಾಡಿದ ವಸ್ತುಗಳು ಮತ್ತು ಹಣವನ್ನು ಮರಳಿ ನೀಡಬೇಕು ಮತ್ತು ಮೂಲಕ ಹುಡುಗರನ್ನು ಬಲೆಗೆ ಬೀಳಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತಾ ಅಜಯ್ ಕುಮಾರ್ ಆಗ್ರಹಿಸಿದ್ದಾರೆ.